ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯ ಭಾರತೀಯ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. ಮೊದಲು ರೋಹಿತ್ ಶರ್ಮಾ ಸ್ಫೋಟಕ ಶತಕದ ಬಳಿಕ ಟೀಂ ಇಂಡಿಯಾ ಬೌಲರ್‌ಗಳು ಆರ್ಭಟಿಸಿದರು. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಲಖನೌ(ನ.06): ವೆಸ್ಟ್ ಇಂಡೀಸ್ ವಿರುದ್ದ ಟೆಸ್ಟ್ ಹಾಗೂ ಏಕದಿನ ಸರಣಿ ಬಳಿಕ ಇದೀಗ ಟಿ20 ಸರಣಿಯನ್ನೂ ಟೀಂ ಇಂಡಿಯಾ ಕೈವಶ ಮಾಡಿದೆ. ಲಖೌನದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ 71 ರನ್‌ಗಳ ಭರ್ಜರಿ ಗೆಲುವು ದಾಖಲಿಸೋ ಮೂಲಕ ಇನ್ನೊಂದು ಪಂದ್ಯ ಬಾಕಿ ಇರುವಂತೆ ಸರಣಿ ಗೆದ್ದುಕೊಂಡಿದೆ. ಇಷ್ಟ ಅಲ್ಲ ಸತತ 7ನೇ ಟಿ20 ಸರಣಿ ಗೆದ್ದ ದಾಖಲೆ ಬರೆದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗ ನಾಯಕ ರೋಹಿತ್ ಶರ್ಮಾ ಆಕರ್ಷಕ ಶತಕ ಸಿಡಿಸಿ ಆಸರೆಯಾದರು. ರೋಹಿತ್ ಶರ್ಮಾ 61 ಎಸೆತದಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ ಅಜೇಯ 111 ರನ್ ಸಿಡಿಸಿದರು. ಶಿಖರ್ ಧವನ್ 43 ಹಾಗೂ ಕೆಎಲ್ ರಾಹುಲ್ ಅಜೇಯ 26 ರನ್ ಕಾಣಿಕೆ ನೀಡಿದರು. ಈ ಮೂಲಕ ಭಾರತ 2 ವಿಕೆಟ್ ನಷ್ಟಕ್ಕೆ 195 ರನ್ ಸಿಡಿಸಿತು.
196 ರನ್ ಟಾರ್ಗೆಟ್ ಪಡೆದ ವೆಸ್ಟ್ ಇಂಡೀಸ್ ಮತ್ತೆ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿತು. ಟೀಂ ಇಂಡಿಯಾ ದಾಳಿಗೆ ಸಿಲುಕಿ ತತ್ತರಿಸಿತು. ಶೈ ಹೋಪ್, ಶಿಮ್ರೋನ್ ಹೆಟ್ಮೆಯರ್, ಡರೆನ್ ಬ್ರಾವೋ, ದಿನೇಶ್ ರಾಮ್ದಿನ್ ಸೇರಿದಂತೆ ವಿಂಡೀಸ್ ಘಟಾನುಘಟಿ ಬ್ಯಾಟ್ಸ್‌ಮನ್‌ಗಳು ಆಸರೆಯಾಗಲಿಲ್ಲ.
ನಾಯಕ ಕಾರ್ಲೋಸ್ ಬ್ರಾಥ್ವೈಟ್ ಅಜೇಯ 15 ರನ್ ಸಿಡಿಸಿದರು. ವಿಂಡೀಸ್ ತಂಡದ ಯಾವ ಬ್ಯಾಟ್ಸ್‌ಮನ್ 25 ರನ್ ಗಡಿ ದಾಟಲಿಲ್ಲ. ಹೀಗಾಗಿ ನಿಗಧಿತ 20 ಓವರ್‌ಗಳಲ್ಲಿ ವಿಂಡೀಸ್ 9 ವಿಕೆಟ್ ನಷ್ಟಕ್ಕೆ 124 ರನ್ ಸಿಡಿಸಿತು. ಈ ಮೂಲಕ ಭಾರತ 71 ರನ್‌ಗಳ ಗೆಲುವು ಸಾಧಿಸಿತು. ವೆಸ್ಟ್ ಇಂಡೀಸ್ ಪ್ರಸಕ್ತ ವರ್ಷ 8 ಟಿ20 ಪಂದ್ಯ ಸೋಲೋ ಮೂಲಕ ಗರಿಷ್ಠ ಟಿ20 ಪಂದ್ಯ ಸೋತ ತಂಡ ಅನ್ನೋ ಕುಖ್ಯಾತಿಗೆ ಗುರಿಯಾಯಿತು.
ಭಾರತದ ಪರ ಭುವನೇಶ್ವರ್ ಕುಮಾರ್, ಖಲೀಲ್ ಅಹಮ್ಮದ್, ಜಸ್‌ಪ್ರೀತ್ ಬುಮ್ರಾ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು. 3 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-0 ಮುನ್ನಡೆ ಸಾಧಿಸಿತು.
