ಕೋಲ್ಕತ್ತಾ(ನ.04):  ವೆಸ್ಟ್ ಇಂಡೀಸ್ ವಿರುದ್ದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ 5 ವಿಕೆಟ್‌ ಗೆಲುವು ಸಾಧಿಸಿತು. 

 

 

ಗೆಲುವಿಗೆ 110 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಆರಂಭಿಕ ಹಂತದಲ್ಲಿ ಮುಗ್ಗರಿಸಿತು. ಈ ಮೂಲಕ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿತ್ತು.  ನಾಯಕ ರೋಹಿತ್ ಶರ್ಮಾ 6 ರನ್ ಸಿಡಿಸಿ ಔಟಾದರು. ಮತ್ತೊರ್ವ ಆರಂಭಿಕ ಶಿಖರ್ ಧವನ್ 3 ರನ್ ದಾಟಲಿಲ್ಲ. ಏಕದಿನ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕನ್ನಡಿಗ ಕೆಎಲ್ ರಾಹುಲ್ ಸಿಕ್ಕ ಅವಕಾಶ ಉಪಯೋಗಿಸಲಿಲ್ಲ. ರಾಹುಲ್ 16 ರನ್ ಸಿಡಿಸಿ ಔಟಾದರು.

ಎಂ.ಎಸ್ ಧೋನಿ ಬದಲು ಚುಟುಕು ಮಾದರಿಯಲ್ಲಿ ಅವಕಾಶ ಪಡೆದ ಯುವ ಕ್ರಿಕೆಟಿಗ ರಿಷಬ್ ಪಂತ್ 1 ರನ್ ಸಿಡಿಸಿ ನಿರ್ಗಮಿಸಿದರು. ಹೀಗಾಗಿ 45 ರನ್ ಸಿಡಿಸುವಷ್ಟರಲ್ಲೇ ಭಾರತ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಕನ್ನಡಿಗ ಮನೀಶ್ ಪಾಂಡೆ ಹಾಗೂ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಜೊತೆಯಾಟದಿಂದ ಚೇತರಿಸಿಕೊಂಡಿತು.

ಪಾಂಡೆ 19 ರನ್ ಸಿಡಿಸಿ ಔಟಾದರು. ಆದರೆ ದಿನೇಶ್ ಕಾರ್ತಿಕ್ ಹಾಗೂ ಕ್ರುನಾಲ್ ಪಾಂಡ್ಯ ಅತ್ಯುತ್ತಮ ಹೋರಾಟ ನೀಡಿದರು. ಕ್ರುನಾಲ್ ಅಜೇಯ 21 ರನ್ ಸಿಡಿಸಿದರೆ, ಕಾರ್ತಿಕ್ ಅಜೇಯ 31 ರನ್ ಬಾರಿಸಿದರು. ಈ ಮೂಲಕ ಭಾರತ 17.5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗೆಲುವು ಸಾಧಿಸಿತು.3 ಪಂದ್ಯಗಳ ಟಿ20 ಸರಣಿಯಲ್ಲಿ ಟೀಂ ಇಂಡಿಯಾ 1-0 ಮುನ್ನಡೆ ಸಾಧಿಸಿತು.