ಇಂದೋರ್(ಅ.07): ಕಳೆದ ನಾಲ್ಕು ವರ್ಷಗಳಿಂದ ತವರಿನಲ್ಲಿ ಅಜೇಯ ತಂಡವಾಗಿ ಜೈತ್ರಯಾತ್ರೆ ಮೆರೆದಿರುವ ಭಾರತ ಇದೀಗ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ತೃತೀಯ ಹಾಗೂ ಕೊನೆಯ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿದ್ದು, ಕೇನ್ ವಿಲಿಯಮ್ಸನ್ ಸಾರಥ್ಯದ ನ್ಯೂಜಿಲೆಂಡ್ ತಂಡ ಕ್ಲೀನ್‌ಸ್ವೀಪ್ ಭೀತಿಯಲ್ಲಿದೆ.
ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಫೇವರಿಟ್ ಎನಿಸಿದ್ದರೆ, ಕಳೆದೆರಡು ಟೆಸ್ಟ್ ಪಂದ್ಯಗಳಲ್ಲಿನ ಸೋಲು ಕಿವೀಸ್ ಪಡೆಯನ್ನು ಅಧೀರವಾಗಿಸಿದ್ದು ವೈಟ್‌ವಾಶ್‌ನಿಂದ ಪಾರಾಗುವ ಬಗೆ ಎಂತೆಂದು ಅದು ಚಿಂತಿಸುವಂತಾಗಿದೆ.
ನಾಲ್ಕನೇ ವೈಟ್‌ವಾಶ್‌ನತ್ತ ಚಿತ್ತ
ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕನೇ ವೈಟ್‌ವಾಶ್‌ಗೆ ಭಾರತ ಎದುರುನೋಡುತ್ತಿದೆ. 2012ರಲ್ಲಿ ಅಲೆಸ್ಟೈರ್ ಕುಕ್ ನೇತೃತ್ವದ ಇಂಗ್ಲೆಂಡ್‌ಗೆ 1-2ರಿಂದ ಮಣಿದ ನಂತರದ ತವರಿನ ಸರಣಿಗಳಲ್ಲಿ ಭಾರತ ಪ್ರಚಂಡ ಪ್ರದರ್ಶನದೊಂದಿಗೆ ಸೋಲರಿಯದ ತಂಡವಾಗಿ ಮನೋಜ್ಞ ಆಟವಾಡುತ್ತಾ ಸಾಗಿದೆ. ಆಸ್ಪ್ರೇಲಿಯಾ ವಿರುದ್ಧ (4-0), ವೆಸ್ಟ್‌ಇಂಡೀಸ್ ವಿರುದ್ಧ (2-0) ಮತ್ತು ದ.ಆಫ್ರಿಕಾ (3-0) ಅಂತರದಲ್ಲಿ ಜಯಶಾಲಿಯಾಗಿರುವ ಭಾರತ, ಇದೀಗ ಕಿವೀಸ್ ವಿರುದ್ಧವೂ 3-0 ಅಂತರದಲ್ಲಿ ಗೆಲುವು ಸಾಧಿಸುವ ಹುರುಪಿನಲ್ಲಿದೆ.
ಮೊದಲ ದಿನ ಮಳೆಯಾಟ?
ಅಂದಹಾಗೆ 28 ಸಾವಿರ ಪ್ರೇಕ್ಷಕ ಸಾಮರ್ಥ್ಯದ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಮೊಟ್ಟಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ವೈಟ್‌ವಾಶ್ ಎದುರು ನೋಡುತ್ತಿರುವಂತೆಯೇ ಮೊದಲ ದಿನದಾಟಕ್ಕೆ ಮಳೆರಾಯ ಅಡ್ಡಿಪಡಿಸುವ ಸಂಭವವೂ ಇದೆ. ಪಂದ್ಯದ ಮುನ್ನಾ ದಿನದಂದೇ ಮೋಡ ಕವಿದ ಶೀತಲ ವಾತಾವರಣ ಇದ್ದುದು ಇದರ ಮುನ್ಸೂಚನೆ ನೀಡಿದೆ. ಇನ್ನು ಎರಡು ವರ್ಷಗಳ ಬಳಿಕ ಭಾರತ ತಂಡದ ಅಂತಿಮ ಇಲೆವೆನ್‌ನಲ್ಲಿ ಗಂಭೀರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ದುಪ್ಪಟ್ಟಾಗಿವೆ. ದುಲೀಪ್ ಟ್ರೋಫಿ ಸೇರಿದಂತೆ ದೇಶೀಯ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶಿಸಿರುವ ಗಂಭೀರ್, ಮತ್ತೆ ರಾಷ್ಟ್ರೀಯ ತಂಡದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಇನ್ನು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲಿಯೂ ಸಮತೋಲಿತ ಪ್ರದರ್ಶನ ನೀಡುತ್ತಾ ಸಾಗಿರುವ ಭಾರತ ತಂಡ ಕಿವೀಸ್‌ಗೆ ಭಾರೀ ಸವಾಲಾಗಿ ನಿಂತಿದೆ.
ವಿಲಿಯಮ್ಸನ್ ಆಟ?
ಅನಾರೋಗ್ಯದ ಹಿನ್ನೆಲೆಯಲ್ಲಿ ನಿರ್ಣಾಯಕವಾಗಿದ್ದ ಕೋಲ್ಕತಾ ಟೆಸ್ಟ್ ಪಂದ್ಯಕ್ಕೆ ಅಲಭ್ಯವಾಗಿದ್ದ ಕಿವೀಸ್ ಕಪ್ತಾನ ಕೇನ್ ವಿಲಿಯಮ್ಸನ್ ಗುರುವಾರ ನೆಟ್‌ನಲ್ಲಿ ಕೆಲಹೊತ್ತು ಅಭ್ಯಾಸ ನಡೆಸುವ ಮೂಲಕ ಕೊನೆಯ ಟೆಸ್ಟ್ ಪಂದ್ಯದಲ್ಲಿ ಆಡುವ ಸುಳಿವು ನೀಡಿದರು. ಆದಾಗ್ಯೂ ಈಗಾಗಲೇ ಸರಣಿ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಅವರು ಪಂದ್ಯದಿಂದ ಹಿಂದೆ ಸರಿದರೂ ಅಚ್ಚರಿಯಿಲ್ಲ. ಆದರೆ, ಭಾರತದ ಸ್ಪಿನ್‌ದ್ವಯರಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಚಮತ್ಕಾರಿ ಬೌಲಿಂಗ್‌ಗಷ್ಟೇ ಅಲ್ಲದೆ, ವೇಗದ ಬೌಲಿಂಗ್‌ಗೂ ತಡಬಡಾಯಿಸುತ್ತಿರುವ ನ್ಯೂಜಿಲೆಂಡ್ ತಂಡದ ಕ್ಲೀನ್‌ಸ್ವೀಪ್ ಭೀತಿಯನ್ನು ಹೋಗಲಾಡಿಸಲು ವಿಲಿಯಮ್ಸನ್ ಪಂದ್ಯದಲ್ಲಿ ಆಡುವುದು ಅನಿವಾರ‍್ಯವಾಗಿದೆ. ಇದಲ್ಲದೆ, ಕಳಪೆ ಫಾಮ್‌ರ್‍ನಲ್ಲಿರುವ ಅನುಭವಿ ಬ್ಯಾಟ್ಸ್‌ಮನ್ ರಾಸ್ ಟೇಲರ್ ಕೂಡ ಜವಾಬ್ದಾರಿಯುತ ಪ್ರದರ್ಶನ ನೀಡಬೇಕಿದೆ. ಟಾಮ್ ಲಾಥಮ್, ಲೂಕ್ ರೊಂಚಿ ಸೇರಿದಂತೆ ಮಿಕ್ಕವರು ಸ್ಥಿರ ಪ್ರದರ್ಶನ ನೀಡುವುದರ ಜತೆಗೆ ಬೌಲಿಂಗ್‌ನಲ್ಲಿಯೂ ಕಿವೀಸ್ ಮೊನಚು ತೋರಬೇಕಿದೆ.
ಸಂಭವನೀಯ ಆಟಗಾರರು
ಭಾರತ
ಗೌತಮ್ ಗಂಭೀರ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ವೃಧಿಮಾನ್ ಸಾಹ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ಆರ್. ಅಶ್ವಿನ್, ಉಮೇಶ್ ಯಾದವ್ / ಶಾರ್ದೂಲ್ ಠಾಕೂರ್ ಮತ್ತು ಮೊಹಮದ್ ಶಮಿ.
ನ್ಯೂಜಿಲೆಂಡ್
ಟಾಮ್ ಲಾಥಮ್, ಮಾರ್ಟಿನ್ ಗುಪ್ಟಿಲ್ / ಹೆನ್ರಿ ನಿಕೊಲಾಸ್, ಕೇನ್ ವಿಲಿಯಮ್ಸನ್ (ನಾಯಕ), ರಾಸ್ ಟೇಲರ್, ಲೂಕ್ ರೊಂಚಿ, ಮಿಚೆಲ್ ಸ್ಯಾಂಟ್ನರ್, ಬಿ.ಜೆ. ವಾಟ್ಲಿಂಗ್ (ವಿಕೆಟ್‌ಕೀಪರ್), ಮ್ಯಾಟ್ ಹೆನ್ರಿ, ಜೀತನ್ ಪಟೇಲ್, ನೀಲ್ ವ್ಯಾಗ್ನರ್ ಮತ್ತು ಟ್ರೆಂಟ್ ಬೌಲ್ಟ್.
ಪಂದ್ಯ ಆರಂಭ: ಬೆಳಗ್ಗೆ 9.30
