ಡುಬ್ಲಿನ್[ಜೂ.27] ಬಹುನಿರೀಕ್ಷಿತ ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ವಿರುದ್ಧ 2 ಪಂದ್ಯಗಳ ಟಿ20 ಸರಣಿ ಆಡಲಿದೆ. ವಿರಾಟ್ ಕೊಹ್ಲಿ ಪಡೆಯ ಯುಕೆ ಪ್ರವಾಸ ಇಂದಿನಿಂದ ಆರಂಭಗೊಳ್ಳಲಿದ್ದು, ಇಲ್ಲಿನ ಹೊರವಲಯದಲ್ಲಿರುವ ಮಲಾಹೈಡ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ.

ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಪ್ರಚಂಡ ಲಯದಲ್ಲಿರುವ ಇಂಗ್ಲೆಂಡ್ ತಂಡದಿಂದ ಭಾರತಕ್ಕೆ ಕಠಿಣ ಸವಾಲು ಎದುರಾಗಲಿದ್ದು, ಅದಕ್ಕಾಗಿ ಭಾರತ ಮಾನಸಿಕವಾಗಿ ಸಿದ್ಧಗೊಳ್ಳಬೇಕಿದೆ. ಇಂಗ್ಲೆಂಡ್ ವಿರುದ್ಧ ಮುಂದಿನ ವಾರ ಆರಂಭಗೊಳ್ಳಲಿರುವ ಟಿ20 ಸರಣಿಗೂ ಮುನ್ನ ಸರಿಯಾದ ತಂಡ ಸಂಯೋಜನೆ ಮಾಡಿಕೊಳ್ಳಲು ಸಹ ಈ ಸರಣಿ ನೆರವಾಗಲಿದೆ.
ಕಳೆದ ಶನಿವಾರ ಇಂಗ್ಲೆಂಡ್ ತಲುಪಿದ ಭಾರತ, ಸೋಮವಾರ ಅಲ್ಲಿನ ಶಾಲಾ ಮೈದಾನವೊಂದರಲ್ಲಿ ಅಭ್ಯಾಸ ನಡೆಸಿತು. ಪಂದ್ಯದ ಸ್ಥಿತಿಯನ್ನು ತಲೆಯಲ್ಲಿಟ್ಟುಕೊಂಡು ಅಭ್ಯಾಸವನ್ನು ಆಯೋಜಿಸಲಾಗಿತ್ತು. ಆಫ್ರಿಕಾ ಪ್ರವಾಸದ ಬಳಿಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ತಂಡ ರಚನೆಯಾಗಿದ್ದು,

ಭಾರತ ಶತಾಯಗತಾಯ ಯುಕೆ ಪ್ರವಾಸವನ್ನು ಅತ್ಯುತ್ತಮವಾಗಿ ಮುಕ್ತಾಯಗೊಳಿಸಲು ಕಾತರಿಸುತ್ತಿದೆ. ಶಿಖರ್ ಧವನ್, ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲು ಸಿದ್ಧರಿದ್ದು, ವಿರಾಟ್ ಕೊಹ್ಲಿ ಎಂದಿನಂತೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕೆ.ಎಲ್. ರಾಹುಲ್ ಟಿ20 ತಂಡದ ಕಾಯಂ ಸದಸ್ಯರಾಗಿದ್ದು, 4ನೇ ಕ್ರಮಾಂಕವನ್ನು ತಮ್ಮದಾಗಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಎಂ.ಎಸ್.ಧೋನಿ 5ನೇ ಕ್ರಮಾಂಕದಲ್ಲಿ ಆಡಿದರೆ, ಫಿನಿಶರ್ ಪಾತ್ರಕ್ಕೆ ಮನೀಶ್ ಪಾಂಡೆ ಹಾಗೂ ಸುರೇಶ್ ರೈನಾ ನಡುವೆ ಪೈಪೋಟಿ ಇದೆ. ದಿನೇಶ್ ಕಾರ್ತಿಕ್ ಸಹ ಸ್ಪರ್ಧೆಯಲ್ಲಿದ್ದಾರೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ಪಿನ್ನರ್‌ಗಳಾದ ಚಹಲ್ ಹಾಗೂ ಕುಲ್ದೀಪ್ ಇಬ್ಬರಿಗೂ ಮೊದಲ ಪಂದ್ಯದಿಂದಲೇ ಅವಕಾಶ ಸಿಗುವ ಸಾಧ್ಯತೆ ಇದೆ. ಭುವನೇಶ್ವರ್ ಕುಮಾರ್, ಬುಮ್ರಾ ಭಾರತದ ಮೊದಲ ಆಯ್ಕೆಯ ವೇಗಿಗಳಾಗಿದ್ದು ಉಮೇಶ್ ಹಾಗೂ ಸಿದ್ಧಾರ್ಥ್ ಕೌಲ್ ಸಹ ತಂಡದಲ್ಲಿದ್ದಾರೆ.

ಮತ್ತೊಂದೆಡೆ ಐರ್ಲೆಂಡ್ ಪರ ನಾಯಕ ಗ್ಯಾರಿ ವಿಲ್ಸನ್, ಪೋರ್ಟರ್‌ಫೀಲ್ಡ್ ಹಾಗೂ ಕೆವಿನ್ ಓ ಬ್ರಿಯಾನ್ ಭಾರತ ವಿರುದ್ಧ ಟಿ20 ಪಂದ್ಯವನ್ನಾಡಿದ ಅನುಭವ ಹೊಂದಿದ್ದಾರೆ. ಇದೇ ವೇಳೆ ಪಂಜಾಬ್ ಮೂಲದ ಸ್ಪಿನ್ನರ್ ಸಿಮ್ರನ್‌ಜಿತ್ ಸಿಂಗ್ ಐರ್ಲೆಂಡ್ ಜೆರ್ಸಿ ತೊಟ್ಟು ಆಡಲಿದ್ದು, ತಾವು ಹುಟ್ಟಿದ ದೇಶದ ವಿರುದ್ಧ ಮಿಂಚುವ ಕನಸು ಕಾಣುತ್ತಿದ್ದಾರೆ. 

ಭಾರತಕ್ಕಿಂದು ಸ್ಮರಣೀಯ ಪಂದ್ಯ:
ಐರ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯ ಭಾರತದ ಪಾಲಿಗೆ ಹೊಸ ಮೈಲಿಗಲ್ಲು. ತಂಡ ತನ್ನ 100ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಲಿದೆ. 2006ರಲ್ಲಿ ದ.ಆಫ್ರಿಕಾ ವಿರುದ್ಧ ಭಾರತ ತನ್ನ ಮೊದಲ ಟಿ20 ಪಂದ್ಯವನ್ನಾಡಿತು. ಈ ಪಂದ್ಯವನ್ನು 6 ವಿಕೆಟ್ ಗಳಿಂದ ಗೆದ್ದುಕೊಂಡ ತಂಡ, 2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಆಗಿತ್ತು.  ಭಾರತ ಈವರೆಗೂ 99 ಟಿ20 ಪಂದ್ಯಗಳನ್ನಾಡಿದ್ದು 62ರಲ್ಲಿ ಗೆದ್ದರೆ, 35ರಲ್ಲಿ ಸೋಲುಂಡಿದೆ. ಉಳಿದ 2 ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಿಲ್ಲ. 100 ಪಂದ್ಯಗಳನ್ನು ಪೂರೈಸಲಿರುವ 7ನೇ ತಂಡ ಭಾರತ.

ಪಂದ್ಯ ಆರಂಭ: ರಾತ್ರಿ 8.30ಕ್ಕೆ, ನೇರ ಪ್ರಸಾರ: ಸೋನಿ ಸಿಕ್ಸ್