ಲಾರ್ಡ್ಸ್[ಆ.09]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಆರಂಭಕ್ಕೆ ವರುಣ ಅಡ್ಡಿಯಾಗಿದ್ದು, ಪಂದ್ಯ ತಡವಾಗಿ ಆರಂಭವಾಗಲಿದೆ. ಟಾಸ್ ಆಗುವುದು ಕೊಂಚ ತಡವಾಗಲಿದೆ.

ಈಗಾಗಲೇ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಇಂಗ್ಲೆಂಡ್ ತಂಡಕ್ಕೆ ಆಘಾತ ನೀಡಲು ವಿರಾಟ್ ಕೊಹ್ಲಿ ಪಡೆ ಸಜ್ಜಾಗಿದೆ. ಇನ್ನು 2014ರ ಇಂಗ್ಲೆಂಡ್ ಪ್ರವಾಸದಲ್ಲಿ ಲಾರ್ಡ್ಸ್ ನೆಲದಲ್ಲಿ ಐತಿಹಾಸಿಕ ಜಯ ಸಾಧಿಸಿತ್ತು. ಇದೇ ಸ್ಫೂರ್ತಿಯೊಂದಿಗೆ ಟೀಂ ಇಂಡಿಯಾ ಕಣಕ್ಕಿಳಿಯಲಿದೆ.

ಇನ್ನು ಲಾರ್ಡ್ಸ್ ಮೈದಾನವು ಇಂಗ್ಲೆಂಡ್ ಪಾಲಿಗೆ ಅದೃಷ್ಟದಾಯಕ ಮೈದಾನವಾಗಿದ್ದು, ಇಲ್ಲಿ ಇಂಗ್ಲೆಂಡ್ 134 ಟೆಸ್ಟ್ ಪಂದ್ಯಗಳನ್ನಾಡಿದ್ದು, 53 ಗೆಲುವು, 32 ಸೋಲು ಹಾಗೂ 49 ಡ್ರಾ ಸಾಧಿಸಿದೆ. ಆದರೆ ಕಳೆದ 10 ಪಂದ್ಯಗಳಲ್ಲಿ ತಲಾ 4 ಗೆಲುವು ಹಾಗೂ ಸೋಲು ಕಂಡಿದೆ. ಅದೇ ರೀತಿ ಭಾರತ ವಿರುದ್ಧ ಲಾರ್ಡ್ಸ್’ನಲ್ಲಿ ಇಂಗ್ಲೆಂಡ್ ತಂಡವು 17 ಪಂದ್ಯಗಳನ್ನಾಡಿ 11ರಲ್ಲಿ ಜಯ ಸಾಧಿಸಿದೆ. ಇನ್ನು ಭಾರತ ತಂಡ ಕೇವಲ ಎರಡು ಬಾರಿ ಮಾತ್ರ ಗೆಲುವಿನ ಸಿಹಿಯುಂಡಿದೆ. 1986 ಹಾಗೂ 2014ರಲ್ಲಿ ಭಾರತ ಗೆಲುವಿನ ಕೇಕೆ ಹಾಕಿದೆ. ಇದೀಗ ಅಂತಹದ್ದೇ ಫಲಿತಾಂಶದ ನಿರೀಕ್ಷೆಯಲ್ಲಿದೆ