ಪರ್ತ್ ಟೆಸ್ಟ್: ಸಚಿನ್, ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ!
ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ನಾಯಕ ವಿರಾಟ್ ಕೊಹ್ಲಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ಸೇರಿದಂತೆ ಹಲವು ಕ್ರಿಕೆಟಿಗರು ದಾಖಲೆಗಳನ್ನ ಪುಡಿ ಮಾಡಿದ್ದಾರೆ.
ಪರ್ತ್(ಡಿ.16): ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 25ನೇ ಸೆಂಚುರಿ ಪೂರೈಸಿದ ವಿರಾಟ್ ಕೊಹ್ಲಿ, ಹಲವು ದಾಖಲೆ ನಿರ್ಮಿಸಿದ್ದಾರೆ.
ಆಸಿಸ್ ನೆಲದಲ್ಲಿ ಅಂತಾರಾಷ್ಟ್ರೀಯ 10 ಶತಕ
ಆಸ್ಟ್ರೇಲಿಯಾದಲ್ಲಿ ಪ್ರವಾಸಿ ಬ್ಯಾಟ್ಸ್‌ಮನ್ ಆಗಿ ಗರಿಷ್ಠ ಅಂತಾರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ವಿರಾಟ್ ಒಟ್ಟು 10 ಶತಕ ಸಿಡಿಸಿದ್ದಾರೆ. ಈ ಮೂಲಕ ಆಸಿಸ್ ನೆಲದಲ್ಲಿ 9 ಶತಕ ಸಾಧನೆ ಮಾಡಿದ್ದ ಇಂಗ್ಲೆಂಡ್‌ನ ಜ್ಯಾಕ್ ಹೊಬ್ಸ್ ಹಾಗೂ ಡೇವಿಡ್ ಗೊವರ್ ದಾಖಲೆಯನ್ನ ಮುರಿದಿದ್ದಾರೆ.
ಆಸಿಸ್ ನೆಲದಲ್ಲಿ 6ನೇ ಟೆಸ್ಟ್ ಶತಕ
ಪರ್ತ್ ಟೆಸ್ಟ್ ಶತಕದ ಮೂಲಕ ಕೊಹ್ಲಿ ಆಸಿಸ್ ನೆಲದಲ್ಲಿ 6ನೇ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದರೊಂದಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ್ದಾರೆ. ಆಸಿಸ್ ನೆಲದಲ್ಲಿ ಗರಿಷ್ಠ ಟೆಸ್ಟ್ ಶತಕ ಸಿಡಿಸಿ 3ನೇ ಪ್ರವಾಸಿ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ನಾಯಕನಾಗಿ ಆಸಿಸ್ ನೆಲದಲ್ಲಿ 4ನೇ ಶತಕ
ನಾಯಕನಾಗಿ ಆಸ್ಟ್ರೇಲಿಯಾ ನೆಲದಲ್ಲಿ ಕೊಹ್ಲಿ 4ನೇ ಶತಕ ಪೂರೈಸಿದ್ದಾರೆ. ಈ ಮೂಲಕ ವೆಸ್ಟ್ ಇಂಡೀಸ್ ದಿಗ್ಗಜ ಕ್ಲೈವ್ ಲಾಯ್ಡ್ ದಾಖಲೆ ಸರಿಗಟ್ಟಿದ್ದಾರೆ. ಲಾಯ್ಡ್ ಕೂಡ ನಾಯಕನಾಗಿ ಆಸಿಸ್ ನೆಲದಲ್ಲಿ 4 ಸೆಂಚುರಿ ಸಿಡಿಸಿದ್ದಾರೆ.
ಅತೀ ವೇಗದಲ್ಲಿ 25 ಟೆಸ್ಟ್ ಶತಕ
ಕಡಿಮೆ ಇನ್ನಿಂಗ್ಸ್‌ನಲ್ಲಿ 25 ಟೆಸ್ಟ್ ಶತಕ ಪೂರೈಸಿದವರಲ್ಲಿ ಆಸ್ಟ್ರೇಲಿಯಾದ ಡೋನಾಲ್ಡ್ ಬ್ರಾಡ್ಮನ್ ಮೊದಲ ಸ್ಥಾನದಲ್ಲಿದ್ದಾರೆ. ಬ್ರಾಡ್ಮನ್ 68 ಇನ್ನಿಂಗ್ಸ್‌ಗಳಲ್ಲಿ 25 ಶತಕ ಪೂರೈಸಿದ್ದರು. ಇದೀಗ ಕೊಹ್ಲಿ 127 ಇನ್ನಿಂಗ್ಸ್‌ಗಳಲ್ಲಿ 25 ಶತಕ ಪೂರೈಸಿದ್ದಾರೆ. ಈ ಮೂಲಕ 2ನೇ ಸ್ಥಾನದಲ್ಲಿದ್ದಾರೆ.
ಈ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ 1223 ರನ್
ಪ್ರಸಕ್ತ ವರ್ಷದ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊಹ್ಲಿ 1223 ರನ್ ಸಿಡಿಸಿದ್ದಾರೆ. ಈ ಮೂಲಕ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಸಿಡಿಸಿದ ಭಾರತೀಯ ನಾಯಕ ಅನ್ನೋ ದಾಖಲೆಗೆ ಪಾತ್ರರಾಗಿದ್ದಾರೆ.