ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯ ಮೊದಲ ದಿನವೇ ಸಾಕಷ್ಟು ಕುತೂಹಲ ಕೆರಳಿಸಿದೆ.  ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಭಾರತ ತಂಡ ದಿನದಾಟದ ಅಂತ್ಯದಲ್ಲಿ ಅಫ್ಘಾನ್ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಿದರು. ಹೇಗಿತ್ತು ಮೊದಲ ದಿನದಾಟದ ಪ್ರದರ್ಶನ? ಇಲ್ಲಿದೆ ವರದಿ.

ಬೆಂಗಳೂರು(ಜೂ.14): ಭಾರತ ಹಾಗೂ ಆಫ್ಘಾನಿಸ್ತಾನ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡಗಳು ಅತ್ಯುತ್ತಮ ಪ್ರದರ್ಶನ ನೀಡಿದೆ. ಮೊದಲೆರೆಡು ಸೆಶನ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ, ಅಂತಿಮ ಸೆಶನ್‌ನಲ್ಲಿ ಅಫ್ಘಾನಿಸ್ತಾನ ಕಮ್‌ಬ್ಯಾಕ್ ಮಾಡಿತು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ತಂಡ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಶಿಖರ್ ಧವನ್ ಹಾಗೂ ಮುರಳಿ ವಿಜಯ್ ಶತಕ ಸಿಡಿಸಿ ಮಿಂಚಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಶಿಖರ್ ಧವನ್ 96 ಎಸೆತದಲ್ಲಿ 19 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 107 ರನ್ ಸಿಡಿಸಿದರು. ಇನ್ನು ಮುರಳಿ ವಿಜಯ್ 105 ರನ್ ಬಾರಿಸಿ ಔಟಾದರು.

ಕನ್ನಡಿಗ ಕೆಎಲ್ ರಾಹುಲ್ 54 ರನ್‌ಗಳ ಕಾಣಿಕೆ ನೀಡಿದರು. ಆದರೆ ಮಳೆಯಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತು. ಡ್ರಿಂಕ್ಸ್ ಬ್ರೇಕ್ ಸಮಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 304 ರನ್ ಸಿಡಿಸಿತ್ತು. ಆದರೆ ಅಂತಿಮ ಸೆಶನ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ಅಫ್ಘಾನಿಸ್ತಾನ ಪ್ರಮುಖ ನಾಲ್ಕು ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಯಿತು.

ನಾಯಕ ಅಜಿಂಕ್ಯ ರಹಾನೆ ಕೇವಲ 10 ರನ್ ಗಳಿಸಿ ಔಟಾದರೆ, ಬರೋಬ್ಬರಿ 8 ವರ್ಷಗಳ ಬಳಿಕ ತಂಡಕ್ಕೆ ಮರಳಿದ ದಿನೇಶ್ ಕಾರ್ತಿಕ್ 4 ರನ್‌ಗಳಿಸಿ ರನೌಟ್‌ಗೆ ಬಲಿಯಾದರು. ಹಾರ್ದಿಕ್ ಪಾಂಡ್ಯ ಅಜೇಯ 10 ಹಾಗೂ ಆರ್ ಅಶ್ವಿನ್ ಅಜೇಯ 7 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಈ ಮೂಲಕ ದಿನದಾಟದ ಅಂತ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 347 ರನ್ ಪೇರಿಸಿತು. 

Scroll to load tweet…

ಅಫ್ಘಾನಿಸ್ತಾನ ಪರ ಯಾಮಿನ್ ಅಹಮ್ಮದ್ಜೈ 2, ವಫಾದರ್, ಸ್ಪಿನ್ನರ್ ರಶೀದ್ ಖಾನ್ ಹಾಗೂ ಮುಜೀಬ್ ಯುಆರ್ ರೆಹಮಾನ್ ತಲಾ ಒಂದು ವಿಕೆಟ್ ಪಡೆದರು. ಎರಡನೇ ದಿನದಾಟದಲ್ಲಿ ಭಾರತ ಗರಿಷ್ಠ ಮೊತ್ತ ಕಲೆಹಾಕಲು ಪ್ರಯತ್ನಿಸಲಿದೆ. ಆದರೆ ದಿನದಾಟದ ಆರಂಭದಲ್ಲಿ ವೇಗಿಗಳಿಗೆ ನೆರವಾಗಿದ್ದ ಬೆಂಗಳೂರು ಪಿಚ್ ಇದೀಗ ಸ್ಪಿನ್ನರ್‌ಗಳಿಗೆ ನೆರವಾಗ್ತಿದೆ. ಹೀಗಾಗಿ ದ್ವಿತೀಯ ದಿನದಾಟ ಕುತೂಹಲ ಕೆರಳಿಸಿದೆ.