ಡಬ್ಲಿನ್(ಜೂ.26): ಭಾರತ ಹಾಗೂ ಐರ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನಾಳೆ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಡೆಯಲಿದೆ. ಇಂಗ್ಲೆಂಡ್ ವಿರುದ್ಧದ ಮಹತ್ವದ ಸರಣಿಗೂ ಮುನ್ನ ನಡೆಯಲಿರುವ 2 ಪಂದ್ಯದ ಟಿ-ಟ್ವೆಂಟಿ ಸರಣಿ ಭಾರತದ ಪಾಲಿಗೆ ಮಹತ್ವದ್ದಾಗಿದೆ.

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸುಲಭ ಗೆಲುವಿನ ವಿಶ್ವಾಸದಲ್ಲಿದೆ. ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದರೆ, ನಾಯಕ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಕನ್ನಡಿಗ ಕೆಎಲ್ ರಾಹುಲ್ 4ನೇ ಕ್ರಮಾಂಕವನ್ನ ಆಕ್ರಮಿಸಿಕೊಳ್ಳೋ ಸಾಧ್ಯತೆ ಹೆಚ್ಚಿದೆ.

ಟಾಪ್ ಆರ್ಡರ್‌ನಲ್ಲಿ ಹೆಚ್ಚಿನ ಗೊಂದಲಗಳಿಲ್ಲ. ಆದರೆ ಮಧ್ಯಮ ಕ್ರಮಾಂಕದ ಆಯ್ಕೆ ತಲೆನೋವು ತಂದಿದೆ. ದಿನೇಶ್ ಕಾರ್ತಿಕ್, ಮನೀಶ್ ಪಾಂಡೆ ಹಾಗೂ ಸುರೇಶ್ ರೈನಾ ಮೂವರಲ್ಲಿ ಯಾರು ಆಯ್ಕೆಯಾಗುತ್ತಾರೆ ಅನ್ನೋ ಕುತೂಹಲ ಈಗ ಎಲ್ಲರಲ್ಲಿ ಮನೆಮಾಡಿದೆ.

ಎಮ್ ಎಸ್ ಧೋನಿ ಹಾಗೂ ಹಾರ್ಧಿಕ್ ಪಾಂಡ್ಯ 6 ಮತ್ತು 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.  ಇನ್ನು ಸ್ಪಿನ್ ಕೋಟಾದಲ್ಲಿ ಯಜುವೇಂದ್ರ ಚೆಹಾಲ್ ಹಾಗೂ ಕುಲದೀಪ್ ಯಾದವ್ ಸ್ಥಾನ ಪಡೆಯೋದು ಬಹುತೇಕ ಖಚಿತವಾಗಿದೆ.

ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬುಮ್ರಾ ವೇಗದ ಸಾರಥ್ಯವಹಿಸಿದರೆ, ಉಮೇಶ್ ಯಾದವ್ ತಂಡಕ್ಕೆ ಕಮ್‌ಬ್ಯಾಕ್ ಮಾಡೋ ವಿಶ್ವಾಸದಲ್ಲಿದೆ. ಐಪಿಎಲ್ ಟೂರ್ನಿಯಲ್ಲಿ ಮಿಂಚಿನ ಪ್ರದರ್ಶನ ನೀಡಿದ ಸಿದ್ಧಾರ್ಥ್ ಕೌಲ್‌ಗೆ ಚೊಚ್ಚಲ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 

ಗ್ಯಾರಿ ವಿಲ್ಸನ್ ನೇತೃತ್ವದ ಐರ್ಲೆಂಡ್ ತಂಡ ಅತ್ಯುತ್ತಮ ಪ್ರದರ್ಶನ ನೀಡೋ ವಿಶ್ವಾಸದಲ್ಲಿದೆ. ಮಾಜಿ ನಾಯಕ ವಿಲಿಯಮ್ ಪೊರ್ಟ್‌ಫೀಲ್ಡ್ ಹಾಗೂ ಆಲ್‌ರೌಂಡರ್ ಕೆವಿನ್ ಒಬ್ರಿಯಾನ್ ಒಳಗೊಂಡ ಐರ್ಲೆಂಡ್ ಭಾರತಕ್ಕೆ ಕಠಿಣ ಸವಾಲು ನೀಡಲು ಸಜ್ಜಾಗಿದೆ.

ಪಂದ್ಯ: ಭಾರತ-ಐರ್ಲೆಂಡ್, ಮೊದಲ ಟಿ20
ಸಮಯ: ರಾತ್ರಿ 8.30 (ಭಾರತೀಯ ಸಮಯ)
ಸ್ಥಳ: ಡಬ್ಲಿನ್, ಐರ್ಲೆಂಡ್
ನೇರಪ್ರಸಾರ: ಸೋನಿ ಸಿಕ್ಸ್