ಭಾರತ-ಲಂಕಾ ಗಾಲೆ ಟೆಸ್ಟ್: ಪಿಚ್ ಫಿಕ್ಸ್?

India-Srilanka Gale test: Row over pitch fixed?
Highlights

2017 ರಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್ ಆಗಿರುವ ವಿಷಯ ಕತಾರ್ ಮೂಲದ ಅಲ್ ಜಜೀರಾ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆ ಮೂಲಕ ಬಹಿರಂಗಗೊಂಡಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನಿಖೆ ಕೈಗೆತ್ತಿಕೊಂಡಿದೆ.

2017 ರಲ್ಲಿ ನಡೆದಿದ್ದ ಭಾರತ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್ ಆಗಿರುವ ವಿಷಯ ಕತಾರ್ ಮೂಲದ ಅಲ್ ಜಜೀರಾ ಸುದ್ದಿ ವಾಹಿನಿಯ ರಹಸ್ಯ ಕಾರ್ಯಾಚರಣೆ ಮೂಲಕ ಬಹಿರಂಗಗೊಂಡಿದೆ. ಈ ಸಂಬಂಧ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತನಿಖೆ ಕೈಗೆತ್ತಿಕೊಂಡಿದೆ.

ಇಲ್ಲಿನ ಗಾಲೆ ಪಿಚ್ ಅನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ಪಿಚ್ ಕ್ಯುರೇಟರ್, ಕ್ರೀಡಾಂಗಣದ ಸಹಾಯಕ ವ್ಯವಸ್ಥಾಪಕ ತರಂಗ ಇಂಡಿಕಾರೊಂದಿಗೆ ಸದ್ಯ ಶಂಕಿತ ಮ್ಯಾಚ್ ಫಿಕ್ಸರ್ ಆಗಿರುವ ಮುಂಬೈನ ಪ್ರಥಮ ದರ್ಜೆ ಮಾಜಿ ಕ್ರಿಕೆಟಿಗ ರಾಬಿನ್ ಮೋರಿಸ್ ವ್ಯವಹಾರ ಕುದುರಿಸುವ ಮೂಲಕ ಫಿಕ್ಸಿಂಗ್ ನಡೆಸಿದ್ದಾರೆ ಎಂದು ಮಾಧ್ಯಮ
ಸಂಸ್ಥೆ ಆರೋಪಿಸಿದೆ. 

ರಹಸ್ಯ ಕಾರ್ಯಾಚರಣೆಯ ಸಂಬಂಧ ವಿಶೇಷ ಕಾರ್ಯಕ್ರಮ ಭಾನುವಾರ ಪ್ರಸಾರವಾಗಲಿದ್ದು, ಸಣ್ಣ ವಿಡಿಯೋ ತುಣುಕುಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ‘ಮ್ಯಾಚ್ ಫಿಕ್ಸಿಂಗ್ ಮಾಹಿತಿ ಆಧಾರದ ಮೇರೆಗೆ ಐಸಿಸಿ ಭ್ರಷ್ಟಾಚಾರ ವಿರೋಧಿ ತಂಡ ಈಗಾಗಲೇ ತನಿಖೆ ಆರಂಭಿಸಿದೆ. ಘಟನೆ ಕುರಿತು ಪೂರ್ಣ ಮತ್ತು ಸಮಗ್ರ ತನಿಖೆ ನಡೆಸಲು ಅಗತ್ಯವಿರುವ ಎಲ್ಲ ಸಾಕ್ಷಾಧಾರಗಳು ಮತ್ತು ಸಂಬಂಧಿಸಿದ ಎಲ್ಲ ಮಾಹಿತಿ ನೀಡಲು ಮಾಧ್ಯಮ ಸಂಸ್ಥೆಗೆ ಮನವಿ ಮಾಡಿದ್ದೇವೆ’ ಎಂದು ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಧಾನ ವ್ಯವಸ್ಥಾಪಕ ಅಲೆಕ್ಸ್ ಮಾರ್ಷಲ್ ಹೇಳಿದ್ದಾರೆ.

‘ಶ್ರೀಲಂಕಾ ಕ್ರಿಕೆಟ್ ಮಂಡಳಿ ತನಿಖೆಗೆ ಸಂಬಂಧಿಸಿದಂತೆ ಸಂಪೂರ್ಣ ಸಹಕಾರ ನೀಡುತ್ತದೆ. ಈ ಸಂಬಂಧ ಶ್ರೀಲಂಕಾ ಕ್ರಿಕೆಟ್ ಸಿಇಒ ಆ್ಯಶ್ಲೆ ಡಿ ಸಿಲ್ವಾ, ಐಸಿಸಿ ಸಿಇಒ ಡೇವಿಡ್ ರಿಚರ್ಡ್ಸ್‌ನ್‌ರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಒಂದು ವೇಳೆ ತಪ್ಪು ಸಾಬೀತಾದರೆ, ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿರುವವರ ವಿರುದ್ಧ ತಕ್ಷಣ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗಾಲೆ ಸ್ಟೇಡಿಯಂನ ಪಿಚ್ ಕ್ಯುರೇಟರ್, ಸಹಾಯಕ ವ್ಯವಸ್ಥಾಪಕ ತರಂಗ ಇಂಡಿಕಾ, ಮೋರಿಸ್ ಬಳಿ ಮಾತನಾಡುತ್ತಾ ನಿಮಗೆ ಪಿಚ್ ಹೇಗೆ ಬೇಕೊ ಹಾಗೇ ಸಿದ್ಧಪಡಿಸುತ್ತೇನೆ. ಬ್ಯಾಟ್ಸ್‌ಮನ್ ಅಥವಾ ಬೌಲರ್ ಗಳಿಗೆ ಬೇಕಾದ ರೀತಿಯಲ್ಲಿ ಪಿಚ್ ಸಿದ್ಧಪಡಿಸುತ್ತೇನೆ. ಪಿಚ್ ಸ್ಪಿನ್ನರ್ ಅಥವಾ ವೇಗಿಗಳಿಗೆ ನೆರವಾಗಬೇಕು ಎಂದರೆ ಹಾಗೇ ಮಾಡುತ್ತೇನೆ ಎಂದು ಹೇಳುತ್ತಾರೆ.

ಇಂಡಿಕಾ ರಹಸ್ಯ ಕಾರ್ಯಾಚರಣೆ ವೇಳೆ , ‘ಬ್ಯಾಟ್ಸ್ ಮನ್‌ಗಳಿಗೆ ನೆರವಾಗುವಂತೆ ಪಿಚ್ ಸಿದ್ಧಪಡಿಸಲಾಗಿತ್ತು. ಪಿಚ್ ಹೆಚ್ಚು ರೋಲ್ ಮಾಡಲಾಗಿತ್ತು. ಜತೆಗೆ ನೀರು ಸಿಂಪಡಿಸಿ ಹೆಚ್ಚು ಗಟ್ಟಿಗೊಳಿಸಲಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ಇದರ ಸಂಪೂರ್ಣ ಲಾಭ ಪಡೆಯಿತು’ ಎಂದು ಹೇಳಿದ್ದಾರೆ. ಪಿಚ್ ಫಿಕ್ಸಿಂಗ್ ನಡೆದಿದೆ ಎನ್ನಲಾದ ಗಾಲೆ ಟೆಸ್ಟ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಶಿಖರ್ ಧವನ್ ಹಾಗೂ ಚೇತೇಶ್ವರ್ ಪೂಜಾರ ಶತಕಗಳ ನೆರವಿನಿಂದ 600 ರನ್ ಗಳಿಸಿತ್ತು. ಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 291 ರನ್‌ಗಳಿಗೆ ಆಲೌಟ್ ಆಗಿತ್ತು.  2ನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅಜೇಯ ಶತಕದ ನೆರವಿನಿಂದ ಭಾರತ 3 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಬೃಹತ್ ಗುರಿ ಬೆನ್ನಟ್ಟಿದ ಲಂಕಾ 245 ರನ್‌ಗೆ ಕುಸಿದು ಭಾರತಕ್ಕೆ 304 ರನ್‌ಗಳ ಭರ್ಜರಿ ಗೆಲುವು ಬಿಟ್ಟುಕೊಟ್ಟಿತ್ತು. 

ಲಂಕಾ ಕ್ರಿಕೆಟ್‌ನಲ್ಲಿ ಪಿಚ್ ಫಿಕ್ಸಿಂಗ್ ಹೊಸದೇನಲ್ಲ. 2016ರಲ್ಲಿ ಗಾಲೆಯ ಕ್ಯುರೇಟರ್ ಜಯನಂದ ವರ್ನ ವೀರಾರನ್ನು ಐಸಿಸಿ 3 ವರ್ಷಗಳ ಅವಧಿಗೆ ನಿಷೇಧಿಸಿತ್ತು. ಇನ್ನು ಭಾರತದಲ್ಲೂ ಇತ್ತೀಚೆಗಷ್ಟೇ ಪಿಚ್ ಫಿಕ್ಸಿಂಗ್ ಸದ್ದು ಮಾಡಿತ್ತು. ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಕ್ಕೂ ಮುನ್ನ ಪುಣೆ ಪಿಚ್ ಕ್ಯುರೇಟರ್ ಪಾಂಡುರಂಗ ರಹಸ್ಯ ಕಾರ್ಯಾಚರಣೆ ವೇಳೆ ಸಿಕ್ಕಿ ಬಿದ್ದಿದ್ದರು. ಆದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಸಾಬೀತಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಕ್ರಮ ಕೈಗೊಂಡಿರಲಿಲ್ಲ. 

loader