ಕಾರ್ಡಿಫ್‌[ಮೇ.29]: ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತನ್ನ ಅಭಿಯಾನ ಆರಂಭಿಸುವ ಮುನ್ನ ಭಾರತ ತಂಡಕ್ಕೆ ಪ್ರಮುಖವಾಗಿ ಕಾಡುತ್ತಿದ್ದ 4ನೇ ಕ್ರಮಾಂಕದ ಸಮಸ್ಯೆಗೆ ಕೊನೆ ಕ್ಷಣದಲ್ಲಿ ಪರಿಹಾರ ಸಿಕ್ಕಂತಿದೆ. ಬಾಂಗ್ಲಾದೇಶ ವಿರುದ್ಧ ಮಂಗಳವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್‌.ರಾಹುಲ್‌ ಆಕರ್ಷಕ ಶತಕ ಬಾರಿಸಿ, 4ನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿದ್ದಾರೆ.

ಜೂ.5ರಂದು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿರುವ ಭಾರತ, 4ನೇ ಕ್ರಮಾಂಕಕ್ಕೆ ಯಾವ ಆಟಗಾರನನ್ನು ಕಣಕ್ಕಿಳಿಸಬೇಕು ಎನ್ನುವ ಗೊಂದಲಕ್ಕೆ ಒಳಗಾಗುವುದನ್ನು ರಾಹುಲ್‌ ತಪ್ಪಿಸಿದ್ದಾರೆ. ಈ ನಡುವೆ ಫಿನಿಶರ್‌ ಪಾತ್ರ ನಿರ್ವಹಿಸಬೇಕಾದ ಹೊಣೆಯನ್ನು ಮತ್ತೊಮ್ಮೆ ಹೊತ್ತಿರುವ ಎಂ.ಎಸ್‌.ಧೋನಿ ಸಹ ಭರ್ಜರಿ ಶತಕ ಬಾರಿಸಿ ವಿಶ್ವಕಪ್‌ಗೆ ಸಿದ್ಧತೆ ನಡೆಸಿದ್ದಾರೆ. ಧೋನಿ ಲಯ ಕಾಯ್ದುಕೊಂಡಿರುವುದು ತಂಡದ ಆತ್ಮವಿಶ್ವಾಸ ವೃದ್ಧಿಸಿದ್ದು, ಕೆಳ ಮಧ್ಯಮ ಕ್ರಮಾಂಕವನ್ನು ಬಲಿಷ್ಠಗೊಳಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದ ಬಾಂಗ್ಲಾದೇಶ ಮೊದಲು ಭಾರತವನ್ನು ಬ್ಯಾಟ್‌ ಮಾಡುವಂತೆ ಆಹ್ವಾನಿಸಿತು. ಶಿಖರ್‌ ಧವನ್‌ (01) ಬೇಗನೆ ಔಟಾದ್ದರಿಂದ ಭಾರತ ನಿರೀಕ್ಷಿತ ಆರಂಭವನ್ನೇನೂ ಪಡೆಯಲಿಲ್ಲ. ರೋಹಿತ್‌ ಶರ್ಮಾ 42 ಎಸೆತಗಳನ್ನು ಎದುರಿಸಿ ಕೇವಲ 19 ರನ್‌ಗೆ ಔಟಾದರು. 3ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೆ.ಎಲ್‌.ರಾಹುಲ್‌ ತಂಡಕ್ಕೆ ಚೇತರಿಕೆ ನೀಡಿದರು. 46 ಎಸೆತಗಳಲ್ಲಿ 47 ರನ್‌ ಸಿಡಿಸಿದ ಕೊಹ್ಲಿ, ಸೈಫುದ್ದೀನ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಕೊಹ್ಲಿ ವಿಕೆಟ್‌ ಪತನಗೊಂಡಾಗ ತಂಡದ ಮೊತ್ತ 3 ವಿಕೆಟ್‌ಗೆ 83 ರನ್‌. ಗಾಯದಿಂದ ಚೇತರಿಸಿಕೊಂಡು ಆಡುವ ಅವಕಾಶ ಪಡೆದ ವಿಜಯ್‌ ಶಂಕರ್‌ (02) ನಿರಾಸೆ ಅನುಭವಿಸಿದರು.

ರಾಹುಲ್‌-ಧೋನಿ ಜುಗಲ್‌ಬಂದಿ: 6ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಧೋನಿ ಜತೆ 5ನೇ ವಿಕೆಟ್‌ಗೆ ಕ್ರೀಸ್‌ ಹಂಚಿಕೊಂಡ ರಾಹುಲ್‌, ಬಾಂಗ್ಲಾ ಬೌಲರ್‌ಗಳ ಮೇಲೆ ಸವಾರಿ ನಡೆಸಿದರು. 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್‌, ಎಚ್ಚರಿಕೆಯ ಬ್ಯಾಟಿಂಗ್‌ ಮುಂದುವರಿಸಿದರು. ಮತ್ತೊಂದೆಡೆ ಧೋನಿ 40 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು.

44ನೇ ಓವರ್‌ನಲ್ಲಿ ರಾಹುಲ್‌ ಔಟಾದರು. 99 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್‌ನೊಂದಿಗೆ 108 ರನ್‌ ಗಳಿಸಿದರು. ರಾಹುಲ್‌ ವಿಕೆಟ್‌ ಪತನಗೊಂಡಾದ ಧೋನಿಯ ವೈಯಕ್ತಿಕ ಮೊತ್ತ 68 ರನ್‌.

45ನೇ ಓವರ್‌ನಿಂದ ಸ್ಫೋಟಕ ಆಟಕ್ಕಿಳಿದ ಧೋನಿಗೆ ಹಾರ್ದಿಕ್‌ ಪಾಂಡ್ಯರಿಂದ ಉತ್ತಮ ಬೆಂಬಲ ದೊರೆಯಿತು. ಹಾರ್ದಿಕ್‌ ಕೇವಲ 11 ಎಸೆತಗಳಲ್ಲಿ 21 ರನ್‌ ಚಚ್ಚಿದರು. 49ನೇ ಓವರ್‌ನ 2ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್‌ನೊಂದಿಗೆ ಧೋನಿ ಶತಕ ಪೂರೈಸಿದರು. ಕೇವಲ 73 ಎಸೆತಗಳಲ್ಲಿ 100 ರನ್‌ ಗಳಿಸಿದ ಧೋನಿ, ಒಟ್ಟಾರೆ 78 ಎಸೆತಗಳಲ್ಲಿ 8 ಬೌಂಡರಿ, 7 ಸಿಕ್ಸರ್‌ನೊಂದಿಗೆ 113 ರನ್‌ ಚಚ್ಚಿ, ಕೊನೆ ಓವರ್‌ನ 2ನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡರು.

ರವೀಂದ್ರ ಜಡೇಜಾ 4 ಎಸೆತಗಳಲ್ಲಿ 11 ರನ್‌ ಗಳಿಸಿದ ಕಾರಣ, ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 359 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿತು.