ಭಾರತ 2036ರ ಒಲಿಂಪಿಕ್ಸ್ ಆಯೋಜಿಸಲು ಸಜ್ಜಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 

ಹಲ್ದ್‌ವಾನಿ(ಉತ್ತರಾಖಂಡ): ಕ್ರೀಡೆಯಲ್ಲಿ ಭಾರತ ಉಜ್ವಲ ಭವಿಷ್ಯ ಹೊಂದಿದೆ. 2036ರಲ್ಲಿ ಯಶಶ್ವಿಯಾಗಿ ಒಲಿಂಪಿಕ್ಸ್ ಭಾರತ ಯೋಜಿಸಲು ಸಿದ್ಧವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಮ್ಮ ಹೇಳಿದ್ದಾರೆ.

ಉತ್ತರಾಖಂಡದಲ್ಲಿ 38ನೇ ರಾಷ್ಟ್ರೀಯ ಗೇಮ್ಸ್‌ಗೆ ಶುಕ್ರವಾರ ತೆರೆ ಬಿತ್ತು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ‘ಭಾರತದಲ್ಲಿ ಒಲಿಂಪಿಕ್ಸ್‌ ಆಯೋಜನೆಗೊಂಡಾಗ ನಮ್ಮ ಅಥ್ಲೀಟ್‌ಗಳು ಪದಕ ಗೆದ್ದು, ದೇಶದ ತ್ರಿವರ್ಣ ಧ್ವಜವನ್ನು ಬಾನೆತ್ತರಕ್ಕೆ ಹಾರಿಸಲಿದ್ದಾರೆ’ ಎಂದಿದ್ದಾರೆ. ‘ನರೇಂದ್ರ ಮೋದಿ 2014ರಲ್ಲಿ ಪ್ರಧಾನಿ ಆದಾಗ ನಮ್ಮ ಕ್ರೀಡಾ ಬಜೆಟ್‌ ₹800 ಕೋಟಿ ಇತ್ತು. ಈಗ ₹3800 ಕೋಟಿಗೆ ಏರಿಕೆಯಾಗಿದೆ. ಇದು ಮೋದಿ ಸರ್ಕಾರದ ಕ್ರೀಡೆಯ ಮೇಲಿನ ಬದ್ಧತೆಗೆ ಸಾಕ್ಷಿ. 2014ರಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ 15 ಪದಕ ಲಭಿಸಿತ್ತು. ಈಗ ಅದು 26 ಆಗಿದೆ. 2014ರ ಏಷ್ಯನ್‌ ಗೇಮ್ಸ್‌ನಲ್ಲಿ 57 ಪದಕ ಗೆದ್ದಿದ್ದರೆ, 2023ರಲ್ಲಿ 107 ಆಗಿದೆ’ ಎಂದು ಶಾ ಸಂತಸ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ, ಮುಂದಿನ ರಾಷ್ಟ್ರೀಯ ಗೇಮ್ಸ್‌ ಆಯೋಜಿಸುವ ಮೇಘಾಲಯಕ್ಕೆ ಭಾರತ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಧ್ವಜ ಹಸ್ತಾಂತರಿಸಿದರು. ಕೇಂದ್ರ ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ, ಉತ್ತರಾಖಂಡ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಹಾಜರಿದ್ದರು.

ಅಂತಿಮ ಪದಕ ಪಟ್ಟಿ(ಟಾಪ್‌-5)

ತಂಡ ಚಿನ್ನ ಬೆಳ್ಳಿ ಕಂಚು ಒಟ್ಟು

ಸರ್ವಿಸಸ್‌ 68 26 27 121

ಮಹಾರಾಷ್ಟ್ರ 54 71 76 201

ಹರ್ಯಾಣ 48 47 58 153

ಮಧ್ಯಪ್ರದೇಶ 34 26 22 82

ಕರ್ನಾಟಕ 34 18 28 80

ಮೇಘಾಲಯದಲ್ಲಿ 2027ರ ಗೇಮ್ಸ್‌

39ನೇ ಆವೃತ್ತಿಯ ರಾಷ್ಟ್ರೀಯ ಗೇಮ್ಸ್‌ 2027ರ ಫೆಬ್ರವರಿ-ಮಾರ್ಚ್‌ನಲ್ಲಿ ಮೇಘಾಲಯದಲ್ಲಿ ನಡೆಯಲಿದೆ. ಶುಕ್ರವಾರ 38ನೇ ರಾಷ್ಟ್ರೀಯ ಗೇಮ್ಸ್‌ನ ಸಮಾರೋಪ ಸಮಾರಂಭದಲ್ಲಿ ಭಾರತ ಒಲಿಂಪಿಕ್‌ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ ಅವರು, ಮೇಘಾಲಯದ ಮುಖ್ಯಮಂತ್ರಿ ಕೊನ್ರಾಡ್‌ ಸಂಗ್ಮಾಗೆ ಧ್ವಜ ಹಸ್ತಾಂತರಿಸಿದರು. ಕಳೆದ ಬಾರಿ ಅಂದರೆ 2023ರಲ್ಲಿ ಗೋವಾದಲ್ಲಿ ರಾಷ್ಟ್ರೀಯ ಗೇಮ್ಸ್‌ ಆಯೋಜನೆಗೊಂಡಿತ್ತು.

ಕ್ರೀಡೆಗೆ ಈ ಬಾರಿ ಬಜೆಟ್‌ನಲ್ಲಿ ₹3794 ಕೋಟಿ!

ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಕ್ರೀಡಾ ಕ್ಷೇತ್ರಕ್ಕೆ ಒಟ್ಟಾರೆ 3794 ಕೋಟಿ ರು. ಮೀಸಲಿಡುವುದಾಗಿ ವಿತ್ತ ಸಚಿವೆ ನಿರ್ಮಲಾ ತಿಳಿಸಿದರು. ಬಜೆಟ್‌ ಭಾಷಣದಲ್ಲಿ ವಿವರಗಳನ್ನು ನೀಡಿದ ಅವರು, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಖೇಲೋ ಇಂಡಿಯಾ ಕ್ರೀಡಾಕೂಟಕ್ಕೆ 1000 ಕೋಟಿ ರು. ನೀಡುವುದಾಗಿ ತಿಳಿಸಿದರು. ಕಳೆದ ವರ್ಷ ಖೇಲೋ ಇಂಡಿಯಾಗೆ 800 ಕೋಟಿ ರು.ಗಳ ಅನುದಾನ ನೀಡಲಾಗಿತ್ತು. ಈ ಬಾರಿ 200 ಕೋಟಿ ರು. ಹೆಚ್ಚಳ ಮಾಡಲಾಗಿದೆ.

ಇನ್ನು, 2024-25ರ ಸಾಲಿಗೆ ಹೋಲಿಸಿದರೆ ಈ ವರ್ಷ ಒಟ್ಟಾರೆ 351.98 ಕೋಟಿ ರು. ಹೆಚ್ಚುವರಿ ಅನುದಾನ ಘೋಷಣೆಯಾಗಿದೆ. ಈ ವರ್ಷ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಗೇಮ್ಸ್‌ನಂಥ ಯಾವುದೇ ಪ್ರಮುಖ ಕ್ರೀಡಾಕೂಟಗಳು ಇಲ್ಲದಿದ್ದರೂ, ಹೆಚ್ಚುವರಿ ಅನುದಾನ ಘೋಷಿಸಲಾಗಿದೆ.

ಇನ್ನು, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳಿಗೆ ನೀಡುವ ಆರ್ಥಿಕ ನೆರವನ್ನೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಇದ್ದ 340 ಕೋಟಿ ರು. ಆರ್ಥಿಕ ನೆರವನ್ನು ಈ ಬಾರಿ 400 ಕೋಟಿ ರು.ಗೆ ಹೆಚ್ಚಿಸಲಾಗಿದೆ.