ಚಾಂಪಿಯನ್ಸ್ ಟ್ರೋಫಿಯಲ್ಲಿ ಹರಿಣಗಳ ವಿರುದ್ಧ ಆಡಿದ ನಾಲ್ಕನೇ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರು ಪ್ರಾಬಲ್ಯ ಮೆರೆದರೆ, ಈ ಸೋಲಿನ ಮೂಲಕ ದಕ್ಷಿಣ ಆಫ್ರಿಕಾದ ಚೋಕರ್ಸ್‌ ಹಣೆಪಟ್ಟಿಯಿಂದ ಹೊರಬರಲು ಸಾಧ್ಯವಾಗಲೇಯಿಲ್ಲ.

ಲಂಡನ್(ಜೂ.11): ತೀವ್ರ ಕುತೂಹಲ ಕೆರಳಿಸಿದ್ದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ನಿರ್ಣಾಯಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯ ಭರ್ಜರಿ ಜಯ ಸಾಧಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಮಿಫೈನಲ್'ಗೆ ಲಗ್ಗೆಯಿಟ್ಟಿತು.

ಈ ಗೆಲುವಿನೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹರಿಣಗಳ ವಿರುದ್ಧ ಆಡಿದ ನಾಲ್ಕನೇ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ನರು ಪ್ರಾಬಲ್ಯ ಮೆರೆದರೆ, ಈ ಸೋಲಿನ ಮೂಲಕ ದಕ್ಷಿಣ ಆಫ್ರಿಕಾದ ಚೋಕರ್ಸ್‌ ಹಣೆಪಟ್ಟಿ ಮುಂದುವರಿದಿದೆ

ಇಲ್ಲಿನ ದ ಓವಲ್ ಮೈದಾನದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 191 ರನ್‌ಗಳ ಕಳಪೆ ಮೊತ್ತಕ್ಕೆ ಕಟ್ಟಿಹಾಕಿದ ಭಾರತ, 38 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕೇವಲ 12 ರನ್ ಗಳಿಸಿ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರೂ, 2ನೇ ವಿಕೆಟ್‌'ಗೆ ಜತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ, ಶತಕದ ಜೊತೆಯಾಟವಾಡಿದರು. ದಕ್ಷಿಣ ಆಫ್ರಿಕಾದ ಪ್ರಬಲ ಬೌಲಿಂಗ್ ದಾಳಿಯನ್ನು ಎಚ್ಚರಿಕೆಯಿಂದ ಎದುರಿಸಿದ ಇವರಿಬ್ಬರು, ಯಾವುದೇ ಅನಾಹುತಕ್ಕೆ ದಾರಿ ಮಾಡಿಕೊಳ್ಳಲಿಲ್ಲ.

ಪ್ರಚಂಡ ಲಯದಲ್ಲಿರುವ ಶಿಖರ್ ಧವನ್ ಈ ಪಂದ್ಯಾವಳಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ 50ಕ್ಕಿಂತ ಹೆಚ್ಚು ರನ್ ಬಾರಿಸಿದ ಸಾಧನೆಗೈದರು. ಅಲ್ಲದೇ ಚಾಂಪಿಯನ್ಸ್ ಟ್ರೋಫಿಯಲ್ಲಿ 6ನೇ ಅರ್ಧಶತಕ ದಾಖಲಿಸಿದರು.

ಧವನ್ 83 ಎಸೆತಗಳಲ್ಲಿ 78 ರನ್ ಗಳಿಸಿ ಔಟಾದಾಗ ಭಾರತ ಗೆಲುವಿನ ಹೊಸ್ತಿಲಲ್ಲಿತ್ತು. ಕೊಹ್ಲಿ ಹಾಗೂ ಧವನ್ 128 ರನ್‌'ಗಳ ಜೊತೆಯಾಟದಲ್ಲಿ ಭಾಗಿಯಾಗಿ ತಂಡಕ್ಕೆ ಆಸರೆಯಾದರು.

 ಆಕ್ರಮಣಕಾರಿ ಆಟಕ್ಕೆ ಮುಂದಾಗದೆ ಎಚ್ಚರಿಕೆಯಿಂದ ಕ್ರೀಸ್‌ನಿಲ್ಲಿ ನೆಲೆಯೂರಿದ ನಾಯಕ ವಿರಾಟ್ ಕೊಹ್ಲಿ, 101 ಎಸೆತಗಳಲ್ಲಿ ಅಜೇಯ 76 ರನ್ ಕಲೆಹಾಕಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಕೊಹ್ಲಿಗೆ ಯುವರಾಜ್ ಸಿಂಗ್‌'ರಿಂದ ಉತ್ತಮ ಬೆಂಬಲ ಸಿಕ್ಕಿತು.

ಇದಕ್ಕೂ ಮುನ್ನ ಟಾಸ್ ಗೆದ್ದು ಆಫ್ರಿಕಾಗೆ ಮೊದಲು ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದ ಭಾರತ, ಎದುರಾಳಿಗೆ ಆರಂಭಿಕ ಆಘಾತ ನೀಡುವಲ್ಲಿ ವಿಫಲವಾಯಿತು. ಅನುಭವಿ ಹಾಶಿಂ ಆಮ್ಲಾ ಹಾಗೂ ಕ್ವಿಂಟನ್ ಡಿ ಕಾಕ್ ಮೊದಲ ವಿಕೆಟ್‌'ಗೆ 76 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಆಮ್ಲಾ 35 ರನ್ ಗಳಿಸಿದರೆ, ಡಿ ಕಾಕ್ ತಮ್ಮ ನೆಚ್ಚಿನ ಎದುರಾಳಿ ಭಾರತ ವಿರುದ್ಧ ಮತ್ತೊಂದು ಅರ್ಧಶತಕ ದಾಖಲಿಸಿದರು. ಆಮ್ಲಾ ಹಾಗೂ ಡಿ ಕಾಕ್ ವಿಕೆಟ್ ಪತನದ ಬಳಿಕ ಆಫ್ರಿಕಾ ಕುಸಿತ ಆರಂಭಗೊಂಡಿತು.

ಕೇವಲ 51 ರನ್‌'ಗೆ ದಕ್ಷಿಣ ಆಫ್ರಿಕಾ ಕೊನೆ 8 ವಿಕೆಟ್ ಕಳೆದುಕೊಂಡಿತು. ಒಂದು ಬದಿಯಲ್ಲಿ ಅನುಭವಿ ಜೆ.ಪಿ.ಡುಮಿನಿ ನಿಂತರೂ, ಅವರಿಗೆ ಯಾರಿಂದಲೂ ಬೆಂಬಲ ಸಿಗಲಿಲ್ಲ. 20 ರನ್ ಗಳಿಸಿ ಡುಮಿನಿ ಔಟಾಗದೇ ಉಳಿದರು. ರವೀಂದ್ರ ಜಡೇಜಾ 10 ಓವರ್‌ಗಳಲ್ಲಿ ಕೇವಲ 39 ರನ್ ನೀಡಿ ಆಫ್ರಿಕಾ ರನ್ ವೇಗಕ್ಕೆ ಕಡಿವಾಣ ಹಾಕಿದರೆ, 8 ಓವರ್‌ಗಳಲ್ಲಿ ಕೇವಲ 28 ರನ್ ನೀಡಿ 2 ವಿಕೆಟ್ ಕಬಳಿಸಿ ಜಸ್‌ಪ್ರೀತ್ ಬೂಮ್ರಾ ಮಿಂಚಿದರು. ಭುವನೇಶ್ವರ್ 2, ಅಶ್ವಿನ್, ಪಾಂಡ್ಯ ತಲಾ 1 ವಿಕೆಟ್ ಪಡೆದರು. ಆಫ್ರಿಕಾ ಕೇವಲ 44.3 ಓವರ್‌ಗಳಲ್ಲಿ ತನ್ನ ಇನ್ನಿಂಗ್ಸ್ ಅಂತ್ಯಗೊಳಿಸಿತು. 191 ರನ್‌ಗಳಲ್ಲಿ 16 ರನ್‌ಗಳು ಇತರೆ ರೂಪದಲ್ಲಿ ಬಂದಿದ್ದು ಎನ್ನುವುದು ಗಮನಾರ್ಹ.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 191/10(44.3ಓವರ್)

ಕ್ವಿಂಟಾನ್ ಡಿ ಕಾಕ್ : 53

ಫಾಫ್ ಡ್ಯು ಪ್ಲಸಿಸ್ : 36

ಭುವನೇಶ್ವರ್ ಕುಮಾರ್ : 23/2

ಭಾರತ : 193/2

ಶಿಖರ್ ಧವನ್ : 78

ವಿರಾಟ್ ಕೊಹ್ಲಿ : 76*

ಇಮ್ರಾನ್ ತಾಹಿರ್ : 37/1

ಪಂದ್ಯ ಪುರುಷೋತ್ತಮ: ಜಸ್ಫ್ರೀತ್ ಬುಮ್ರಾ