Asianet Suvarna News Asianet Suvarna News

ಇಂಡಿಯಾ ಓಪನ್‌ ಬಾಕ್ಸಿಂಗ್‌: ಚಿನ್ನಕ್ಕೆ ಮುತ್ತಿಟ್ಟ ಮೇರಿ, ಸರಿತಾ

2ನೇ ಆವೃತ್ತಿಯ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್, ಸರಿತಾ ದೇವಿ ಚಿನ್ನದ ಪದಕ ಮುತ್ತಿಕ್ಕಿದ್ದಾರೆ. 

India Open Boxing 2019 Mary Kom Sarita Devi lead hosts gold rush
Author
Guwahati, First Published May 25, 2019, 11:19 AM IST

ಗುವಾಹಟಿ(ಮೇ.25): 6 ಬಾರಿ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಹಾಗೂ ಅನುಭವಿ ಎಲ್‌.ಸರಿತಾ ದೇವಿ, 2ನೇ ಆವೃತ್ತಿಯ ಇಂಡಿಯಾ ಓಪನ್‌ ಬಾಕ್ಸಿಂಗ್‌ ಟೂರ್ನಿಯಲ್ಲಿ ಭಾರತದ ಚಿನ್ನದ ಬೇಟೆಗೆ ಸ್ಫೂರ್ತಿಯಾದರು. ಶುಕ್ರವಾರ ಮುಕ್ತಾಯಗೊಂಡ ಟೂರ್ನಿಯಲ್ಲಿ ಭಾರತ 12 ಚಿನ್ನದ ಪದಕಗಳನ್ನು ಗೆದ್ದುಕೊಂಡಿತು.

ಏಷ್ಯನ್‌ ಗೇಮ್ಸ್‌ ಚಿನ್ನ ವಿಜೇತ ಅಮಿತ್‌ ಫಂಗಲ್‌ ಪುರುಷರ 52 ಕೆ.ಜಿ ವಿಭಾಗದಲ್ಲಿ ಸಚಿನ್‌ ಸಿವಾಚ್‌ ವಿರುದ್ಧ 4-1ರಲ್ಲಿ ಗೆದ್ದು ಚಿನ್ನ ಜಯಿಸಿ, ಹ್ಯಾಟ್ರಿಕ್‌ ಬಾರಿಸಿದರು. ಸ್ಟ್ಯಾಂಡ್ಜಾ ಟೂರ್ನಿ, ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಅಮಿತ್‌ ಚಿನ್ನ ಗೆದ್ದಿದ್ದರು.

ಒಟ್ಟಾರೆ ಭಾರತ ಪುರುಷರ ನಾಲ್ಕು ವಿಭಾಗಗಳಲ್ಲಿ (52 ಕೆ.ಜಿ, 81 ಕೆಜಿ, 91 ಕೆ.ಜಿ ಹಾಗೂ +91 ಕೆ.ಜಿ) ಹಾಗೂ ಮಹಿಳೆಯರ 3 ವಿಭಾಗಗಳಲ್ಲಿ (51 ಕೆ.ಜಿ, 57 ಕೆ.ಜಿ ಹಾಗೂ 75 ಕೆ.ಜಿ) ಪದಕ ಕ್ಲೀನ್‌ ಸ್ವೀಪ್‌ ಮಾಡಿತು. ಕಳೆದ ವರ್ಷ ನವದೆಹಲಿಯಲ್ಲಿ ನಡೆದಿದ್ದ ಮೊದಲ ಆವೃತ್ತಿಯಲ್ಲಿ ಭಾರತ 6 ಚಿನ್ನದ ಪದಕಗಳನ್ನು ಗೆದ್ದಿತ್ತು.

51 ಕೆ.ಜಿ ವಿಭಾಗದ ಫೈನಲ್‌ನಲ್ಲಿ ವಿಜೋರಾಮ್‌ನ ವನ್ಲಾಲ್‌ ದೌತಿ ವಿರುದ್ಧ 5-0 ಅಂತರದಲ್ಲಿ ಮೇರಿ ಕೋಮ್‌ ಜಯಭೇರಿ ಬಾರಿಸಿದರು. 60 ಕೆ.ಜಿ ವಿಭಾಗದಲ್ಲಿ ಸರಿತಾ ದೇವಿ, ಭಾರತದವರೇ ಆದ ಸಿಮ್ರನ್‌ಜಿತ್‌ ಕೌರ್‌ ವಿರುದ್ಧ 3-2ರಲ್ಲಿ ಜಯಗಳಿಸಿ, 3 ವರ್ಷಗಳಲ್ಲಿ ಮೊದಲ ಚಿನ್ನದ ಪದಕ ಗೆದ್ದರು.

ಮತ್ತೊಬ್ಬ ತಾರಾ ಬಾಕ್ಸರ್‌ ಶಿವ ಥಾಪ ಪುರುಷರ 60 ಕೆ.ಜಿ ವಿಭಾಗದಲ್ಲಿ ಹಾಲಿ ಚಾಂಪಿಯನ್‌ ಮನೀಶ್‌ ಕೌಶಿಕ್‌ ವಿರುದ್ಧ ಜಯಗಳಿಸಿ, ತವರಿನ ಅಭಿಮಾನಿಗಳ ವಿರುದ್ಧ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು.
 

Follow Us:
Download App:
  • android
  • ios