ಗ್ರೇಟರ್ ನೋಯ್ಡಾ(ಸೆ.15): ದುಲೀಪ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಇಂಡಿಯಾ ಬ್ಲೂ ಯಶಸ್ವಿಯಾಗಿದೆ. ಫೈನಲ್ ಪಂದ್ಯದ ಕೊನೆ ದಿನದಾಟದಲ್ಲಿ ಗೆಲ್ಲಲು 10 ವಿಕೆಟ್ ಪಡೆಯಲು ಯಶಸ್ವಿಯಾದ ಗಂಭೀರ್ ಪಡೆ ಇತಿಹಾಸ ಬರೆದಿದೆ. ಇನ್ನು ಪಿಂಕ್ ಬಾಲ್ನ ಹೊನಲು-ಬೆಳಕಿನ ಟೂರ್ನಿ ಕೂಡ ಯಶಸ್ವಿ ಮುಕ್ತಾಯ ಕಂಡಿದೆ.
ಇಡೀ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಗಂಭೀರ್ ಪಡೆ ಕಡೆಗೂ ಟ್ರೋಫಿ ಎತ್ತಿ ಹಿಡಿಯಲು ಸಫಲವಾಯ್ತು. ಲೀಗ್ ಹಂತದಲ್ಲಿಯೇ ಬ್ಲೂ ಭರ್ಜರಿ ಪ್ರದರ್ಶನ ನೀಡಿತ್ತು. ಒಂದು ಗೆಲುವು ಹಾಗೂ ಒಂದು ಡ್ರಾನೊಂದಿಗೆ ಫೈನಲ್ ಪ್ರವೇಶಿಸಿತ್ತು. ಇನ್ನು ಎರಡು ಡ್ರಾಗಳೊಂದಿಗೆ ಫೈನಲ್ ಪ್ರವೇಶಿಸಿದ್ದ ರೆಡ್ ತಂಡ ಟ್ರೋಫಿಗಾಗಿ ಬ್ಲೂ ಪಡೆಗೆ ಸವಾಲ್ ಎಸೆದಿತ್ತು.
ಮೊದಲ ಇನ್ನಿಂಗ್ಸ್ನಲ್ಲಿಯೇ ಗೌತಿ ಪಡೆ ಭರ್ಜರಿ 336ರನ್ಗಳ ಮುನ್ನಡೆ ಸಾಧಿಸಿತ್ತು. ಚೇತೇಶ್ವರ್ ಪೂಜಾರಾ ಅಜೇಯ ದ್ವಿಶತಕದಾಟ, ಜಾಕ್ಸನ್ ಶತಕ ಹಾಗೂ ನಾಯಕ ಗಂಭೀರ್ ಅವರ 98ರನ್ಗಳ ನೆರವಿನಿಂದ ಫಸ್ಟ್ ಇನ್ನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 693ರನ್ ಕಲೆ ಹಾಕಿ ಡಿಕ್ಲೇರ್ ಮಾಡ್ಕೊಂಡಿತ್ತು.
ನಾಲ್ಕನೇ ದಿನದಲ್ಲಿ 2ನೇ ಇನ್ನಿಂಗ್ಸ್ ಆಟಕ್ಕೆ ವರುಣ ಕೊಂಚ ಅಡ್ಡಿ ಪಡೆಸಿದ್ದ. ಆದರೆ, 5ನೇ ದಿನದ ಆರಂಭದಲ್ಲಿಯೇ 5 ವಿಕೆಟ್ ನಷ್ಟಕ್ಕೆ 179 ರನ್ ಕಲೆ ಹಾಕಿದ ಇಂಡಿಯಾ ಬ್ಲೂ 2ನೇ ಇನ್ನಿಂಗ್ಸ್ನಲ್ಲಿಯೂ ಡಿಕ್ಲೇರ್ ಮಾಡಿಕೊಂಡಿತು.
ಕೊನೆ ದಿನದಾಟದಲ್ಲಿ ಇಂಡಿಯಾ ರೆಡ್ ಗೆಲ್ಲಲು 517 ರನ್ಗಳ ಗುರಿ ಬೆನ್ನತ್ತಿತ್ತು. ಆದರೆ, ಜಡೇಜಾ ಸ್ಪಿನ್ ಮೋಡಿಯ ಮುಂದೆ ಆಟ ನಡೆಯಲಿಲ್ಲ. ಇದಕ್ಕೆ ಕರಣ್ ಶರ್ಮಾ ಕೂಡ ಸಾಥ್ ನೀಡಿದರು. ಜಡ್ಡು 5 ವಿಕೆಟ್ ಉರುಳಿಸಿದರೆ, ಕರಣ್ 4 ವಿಕೆಟ್ ಕೀಳುವ ಮೂಲಕ ರೆಡ್ ತಂಡವನ್ನು 161 ರನ್ಗಳಿಗೆ ಆಲೌಟ್ ಮಾಡಿದರು.
ಅಲ್ಲಿಗೆ ಇಂಡಿಯಾ ಬ್ಲೂ 355 ರನ್ಗಳ ಭರ್ಜರಿ ಜಯ ದಾಖಲಿಸ್ತು. ಇನ್ನು ರೆಡ್ ತಂಡ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
