ಗ್ರೇಟರ್‌ ನೋಯ್ಡಾ(ಸೆ.13): ಈಗಾಗಲೇ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿರುವ ಗೌತಮ್‌ ಗಂಭೀರ್‌ ಸಾರಥ್ಯದ ಇಂಡಿಯಾ ಬ್ಲೂ ತಂಡ, ಯುವರಾಜ್‌ ಸಿಂಗ್‌ ನಾಯಕತ್ವದ ಇಂಡಿಯಾ ರೆಡ್‌ ವಿರುದ್ಧ ಪ್ರಭುತ್ವ ಮೆರೆದಿದೆ.

ಇಲ್ಲಿನ ಗ್ರೇಟರ್‌ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ದುಲೀಪ್‌ ಟ್ರೋಫಿ ಫೈನಲ್‌ ಪಂದ್ಯದ ನಾಲ್ಕನೇ ದಿನದಾಟದ ಬಹುಪಾಲು ಮಳೆಯಿಂದಾಗಿ ಗಲಿಬಿಲಿಗೊಂಡಿತು. ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು 693 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದ್ದ ಇಂಡಿಯಾ ಬ್ಲೂ, ಆನಂತರ ಯುವಿ ಪಡೆಯನ್ನು 356 ರನ್‌ಗಳಿಗೆ ಕಟ್ಟಿಹಾಕಿ ಮೂರನೇ ದಿನದಾಟದ ಅಂತ್ಯಕ್ಕೆ 2 ಓವರ್‌ಗಳಲ್ಲಿ 1 ರನ್‌ ಗಳಿಸಿತ್ತು.

ಮಂಗಳವಾರ ಮಳೆ ನಿಂತ ಮೇಲೆ ಆಟ ಮುಂದುವರೆಸಿದ ಮಯಾಂಕ್‌ ಅಗರ್ವಾಲ್‌ (39) ಮತ್ತು ಗೌತಮ್‌ ಗಂಭೀರ್‌ (36) ಮೊದಲ ವಿಕೆಟ್‌ಗೆ 67 ರನ್‌ ಕಲೆಹಾಕಿದರು. ಇನ್ನಿಂಗ್ಸ್‌ನ 18ನೇ ಓವರ್‌ನ ಎರಡನೇ ಎಸೆತದಲ್ಲಿ ಗಂಭೀರ್‌ ಅವರನ್ನು ಎಲ್‌ಬಿ ಬಲೆಗೆ ಕೆಡವುವಲ್ಲಿ ಕುಲದೀಪ್‌ ಯಾದವ್‌ ಯಶ ಕಂಡರು. ದಿನದಾಟದ 9 ಓವರ್‌ಗಳು ಬಾಕಿ ಇದ್ದಾಗ ಇಂಡಿಯಾ ಬ್ಲೂ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 26 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್‌ ಗಳಿಸಿ 426 ರನ್‌ ಮುನ್ನಡೆ ಸಾಧಿಸಿತ್ತು. ಮಯಾಂಕ್‌ 40 ಮತ್ತು ರೋಹಿತ್‌ ಶರ್ಮಾ 3 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು.

ಸಂಕ್ಷಿಪ್ತ ಸ್ಕೋರ್‌

ಇಂಡಿಯಾ ಬ್ಲೂ ಮೊದಲ ಇನ್ನಿಂಗ್ಸ್‌: 693/7 ಡಿಕ್ಲೇರ್‌

ಇಂಡಿಯಾ ರೆಡ್‌ ಮೊದಲ ಇನ್ನಿಂಗ್ಸ್‌: 356

ಇಂಡಿಯಾ ಬ್ಲೂ ಎರಡನೇ ಇನ್ನಿಂಗ್ಸ್‌

26 ಓವರ್‌ಗಳಲ್ಲಿ 1 ವಿಕೆಟ್‌ಗೆ 89

(ಮಯಾಂಕ್‌ ಬ್ಯಾಟಿಂಗ್‌ 40, ಗಂಭೀರ್‌ 36, ರೋಹಿತ್‌ ಶರ್ಮಾ 3 ಬ್ಯಾಟಿಂಗ್‌)