Asianet Suvarna News Asianet Suvarna News

ಪಾಕಿಸ್ತಾನ 74 ರನ್'ಗೆ ಆಲೌಟ್; ಭಾರತೀಯ ಮಹಿಳೆಯರಿಗೆ ಹ್ಯಾಟ್ರಿಕ್ ಗೆಲುವು

ಭಾರತಕ್ಕೆ ಇದು ಹ್ಯಾಟ್ರಿಕ್ ಗೆಲುವಾದರೆ, ಪಾಕಿಸ್ತಾನೀಯರಿಗೆ ಹ್ಯಾಟ್ರಿಕ್ ಸೋಲು. ಭಾರತ ಮೊದಲ ಸ್ಥಾನಕ್ಕೇರಿದರೆ, ಪಾಕಿಸ್ತಾನ ತಳಕ್ಕೆ ಕುಸಿದಿದೆ. ಭಾರತ ಈ ಮೊದಲು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಜಯಭೇರಿ ಭಾರಿಸಿತ್ತು.

india beat pak women in world cup cricket

ಡೆರ್ಬಿ, ಇಂಗ್ಲೆಂಡ್(ಜುಲೈ 02): ಏಕ್ತಾ ಬಿಷ್ತ್ ಅವರ ಮಾರಕ ಸ್ಪಿನ್ ಬೌಲಿಂಗ್ ದಾಳಿಗೆ ನಲುಗಿದ ಅನನುಭವಿ ಪಾಕಿಸ್ತಾನ ತಂಡ ಸ್ವಲ್ಪವೂ ಪ್ರತಿರೋಧವಿಲ್ಲದೇ ಭಾರತೀಯ ಮಹಿಳಾ ತಂಡಕ್ಕೆ ಶರಣಾಗಿದೆ. ಮಹಿಳಾ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತೀಯ ವನಿತೆಯರು 95 ರನ್'ಗಳಿಂದ ಪಾಕಿಸ್ತಾನೀಯರನ್ನು ಮಣಿಸಿದ್ದಾರೆ. ಈ ಮೂಲಕ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇಂದು ನಡೆದ ಪಂದ್ಯದಲ್ಲಿ ಗೆಲ್ಲಲು ಪಡೆದ 170 ರನ್'ಗಳ ಅಲ್ಪ ಮೊತ್ತದ ಗುರಿಯ ಸಮೀಪಕ್ಕೂ ಪಾಕಿಸ್ತಾನೀಯರಿಗೆ ಬರಲಾಗಲಿಲ್ಲ. ಪಾಕಿಸ್ತಾನೀಯರು ಕೇವಲ 74 ರನ್'ಗೆ ಆಲೌಟ್ ಆಗಿದ್ದಾರೆ. ನಹೀದಾ ಖಾನ್ ಮತ್ತು ನಾಯಕಿ ಸನಾ ಮಿರ್ ಮಾತ್ರವೇ ಎರಡಂಕಿ ಮೊತ್ತ ಕಲೆಹಾಕಿದ್ದು. ಉಳಿದವರು ಭಾರತೀಯ ಬೌಲಿಂಗ್ ದಾಳಿಗೆ ತರಗೆಲೆಗಳಂತೆ ಉದುರಿಹೋದರು. ಸನಾ ಮಿರ್ ಕೊಂಚ ಪ್ರತಿರೋಧ ತೋರಿದ್ದರಿಂದ ಭಾರತದ ಗೆಲುವು ಸ್ವಲ್ಪ ವಿಳಂಬವಾಯಿತು. ಎಡಗೈ ಸ್ಪಿನ್ನರ್ ಏಕ್ತಾ ಬಿಷ್ತ್ 18 ರನ್ನಿತ್ತು 5 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಭಾರತ ಮೊದಲು ಬ್ಯಾಟ್ ಮಾಡಿತು. ಹಿಂದಿನ ಪಂದ್ಯಗಳಲ್ಲಿ ಮಿಂಚಿದ್ದ ಸ್ಮೃತಿ ಮಂಧಾನಾ ಬೇಗನೇ ನಿರ್ಗಮಿಸಿದರೂ ಪೂನಂ ರಾವತ್ ಮತ್ತು ದೀಪ್ತಿ ಶರ್ಮಾ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರೂ 2ನೇ ವಿಕೆಟ್'ಗೆ 67 ರನ್ ಸೇರಿಸಿ ತಂಡಕ್ಕೆ ಸ್ವಲ್ಪ ಗಟ್ಟಿ ಬುನಾದಿ ಹಾಕಿದರು. ಅದಾದ ಬಳಿಕ ಭಾರತಕ್ಕೆ ಒಳ್ಳೆಯ ಜೊತೆಯಾಟ ಸಿಗಲಿಲ್ಲ. ಮಧ್ಯಮಕ್ರಮಾಂಕದಲ್ಲಿ ಬಂದ ಸುಷ್ಮಾ ವರ್ಮಾ ಉತ್ತಮ ಆಟವಾಡಿದ್ದರಿಂದ ಭಾರತ ತಂಡ 169 ರನ್ ಕಲೆಹಾಕಲು ಸಾಧ್ಯವಾಯಿತು.

ಪಾಕಿಸ್ತಾನದ ಹುಡುಗಿಯರು ಬೌಲಿಂಗ್ ಮತ್ತು ಫೀಲ್ಡಿಂಗ್'ನಲ್ಲಿ ಸುಧಾರಿತ ಪ್ರದರ್ಶನ ನೀಡಿದರು. ನಶ್ರಾ ಸಂಧು 4 ವಿಕೆಟ್ ಗಳಿಸಿ ಗಮನ ಸೆಳೆದರು.

ಅಂಕಪಟ್ಟಿಯಲ್ಲಿ ಮೊದಲು:
ಭಾರತಕ್ಕೆ ಇದು ಹ್ಯಾಟ್ರಿಕ್ ಗೆಲುವಾದರೆ, ಪಾಕಿಸ್ತಾನೀಯರಿಗೆ ಹ್ಯಾಟ್ರಿಕ್ ಸೋಲು. ಭಾರತ ಮೊದಲ ಸ್ಥಾನಕ್ಕೇರಿದರೆ, ಪಾಕಿಸ್ತಾನ ತಳಕ್ಕೆ ಕುಸಿದಿದೆ. ಭಾರತ ಈ ಮೊದಲು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳ ವಿರುದ್ಧ ಜಯಭೇರಿ ಭಾರಿಸಿತ್ತು.

ಇನ್ನು, ಜುಲೈ 5ರಂದು ಭಾರತ ತಂಡವು ಲಂಕಾ ಮಹಿಳೆಯರನ್ನು ಎದಿರುಗೊಳ್ಳಲಿದೆ. ಅತ್ತ ಪಾಕಿಸ್ತಾನವು ಪ್ರಬಲ ಆಸ್ಟ್ರೇಲಿಯಾ ಪಡೆಯೊಂದಿಗೆ ಸೆಣಸಲಿದೆ. ಅಂದು ನಡೆಯುವ ಮತ್ತೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವನಿತೆಯರು ಮುಖಾಮುಖಿಯಾಗಲಿದ್ದಾರೆ.

ಸ್ಕೋರು ವಿವರ:

ಭಾರತ ಮಹಿಳಾ ತಂಡ 50 ಓವರ್ 169/9
(ಪೂನಮ್ ರಾವತ್ 47, ಸುಷ್ಮಾ ವರ್ಮಾ 33, ದೀಪ್ತಿ ಶರ್ಮಾ 28, ಜುಲನ್ ಗೋಸ್ವಾಮಿ 14 ರನ್ - ನಶ್ರಾ ಸಂಧು 26/4, ಸಾದಿಯಾ ಯೂಸುಫ್ 30/2)

ಪಾಕಿಸ್ತಾನ ಮಹಿಳಾ ತಂಡ 38.1 ಓವರ್ 74 ರನ್ ಆಲೌಟ್
(ಸನಾ ಮಿರ್ 29, ನಹೀದಾ ಖಾನ್ 23 ರನ್ - ಏಕ್ತಾ ಬಿಷ್ತ್ 18/5, ಮಾನಸಿ ಜೋಷಿ 9/2)

Follow Us:
Download App:
  • android
  • ios