ಪಂದ್ಯದ ಕೊನೆಯ 15 ನಿಮಿಷದಲ್ಲಿ ಚಿಲಿ ತಂಡವು ಗೋಲು ಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿತಾದರೂ ಭಾರತದ ರಕ್ಷಣಾ ಕೋಟೆಯನ್ನು ವಂಚಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

ಜೋಹಾನ್ಸ್‌'ಬರ್ಗ್(ಜು.12): ಮಿಡ್‌'ಫೀಲ್ಡರ್ ಪ್ರೀತಿ ದುಬೆ ದಾಖಲಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ, ವಿಶ್ವ ಮಹಿಳಾ ಹಾಕಿ ಲೀಗ್ ಸೆಮಿಫೈನಲ್ ಟೂರ್ನಿಯಲ್ಲಿ 1-0 ಗೋಲುಗಳಿಂದ ಚಿಲಿ ವಿರುದ್ಧ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ವನಿತೆಯರ ತಂಡ ಪಂದ್ಯಾವಳಿಯಲ್ಲಿ ಮೊದಲ ಗೆಲುವು ಪಡೆದಿದ್ದು, ಬಿ ಗುಂಪಿನಲ್ಲಿ 4 ಅಂಕಗಳೊಂದಿಗೆ 2ನೇ ಸ್ಥಾನ ಪಡೆದಿದೆ.

ಇಂದು ನಡೆದ ಪಂದ್ಯದಲ್ಲಿ ಪ್ರೀತಿ ದುಬೆ 38ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಚಿಲಿ ತಂಡದ ಪರ ಯಾವೊಬ್ಬ ಆಟಗಾರ್ತಿ ಸಹ ಗೋಲುಗಳಿಸುವಲ್ಲಿ ಸಫಲರಾಗಲಿಲ್ಲ. ಪೂರ್ಣವಾಧಿ ಆಟದಲ್ಲಿ ಮೂಡಿದ ಏಕೈಕ ಗೋಲು ಭಾರತ ತಂಡದ ಜಯಕ್ಕೆ ಕಾರಣವಾಯಿತು.

ಪಂದ್ಯದ ಕೊನೆಯ 15 ನಿಮಿಷದಲ್ಲಿ ಚಿಲಿ ತಂಡವು ಗೋಲು ಗಳಿಸಲು ಇನ್ನಿಲ್ಲದ ಕಸರತ್ತು ನಡೆಸಿತಾದರೂ ಭಾರತದ ರಕ್ಷಣಾ ಕೋಟೆಯನ್ನು ವಂಚಿಸಲು ಅದಕ್ಕೆ ಸಾಧ್ಯವಾಗಲಿಲ್ಲ.

ಭಾರತ ಇಲ್ಲಿಯವರೆಗೂ 3 ಪಂದ್ಯಗಳನ್ನಾಡಿದ್ದು ಮೊದಲ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ ಡ್ರಾ ಸಾಧಿಸಿತ್ತು. 2ನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 1-4 ಗೋಲುಗಳಿಂದ ಸೋಲುಂಡಿತ್ತು.

ಇನ್ನು ಜುಲೈ 16ರಂದು ಬಿ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಭಾರತದ ವನಿತೆಯರ ತಂಡವು ಅರ್ಜೈಂಟೀನಾ ತಂಡವನ್ನು ಎದುರಿಸಲಿದೆ