47ನೇ ಓವರ್'ನ ಕೊನೆಯಲ್ಲಿ ಕೌಶಿಕ್ ಔಟಾಗುವುದರೊಂದಿಗೆ ತಮಿಳುನಾಡಿನ ಹೋರಾಟ ಬಹುತೇಕ ಸಮಾಪ್ತಿಯಾಯಿತು.
ವಿಶಾಖಪಟ್ಟಣಂ(ಮಾ. 26): ಮನೀಶ್ ಪಾಂಡೆಯವರ ಅಮೋಘ ಶತಕದ ನೆರವಿನಿಂದ ಭಾರತ 'ಬಿ' ತಂಡ ಸತತ ಎರಡನೇ ಗೆಲುವು ದಾಖಲಿಸಿದೆ. ದೇವಧರ್ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಹಾಲಿ ವಿಜಯ್ ಹಜಾರೆ ಟ್ರೋಫಿ ಚಾಂಪಿಯನ್ ತಮಿಳುನಾಡು ವಿರುದ್ಧ ಇಂಡಿಯಾ 'ಬಿ' 32 ರನ್'ಗಳಿಂದ ರೋಚಕ ಜಯ ಪಡೆದಿದೆ. ಗೆಲ್ಲಲು 317 ರನ್ ಗುರಿ ಹೊತ್ತ ತಮಿಳುನಾಡು 284 ರನ್'ಗೆ ಆಲೌಟ್ ಆಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಡಿಯಾ 'ಬಿ' ತಂಡ ಕೇವಲ 14 ರನ್'ಗೆ ಆರಂಭಿಕ ಆಘಾತ ಹೊಂದಿತು. ಆದರೆ, ಶಿಖರ್ ಧವನ್ ಮತ್ತು ಮನೀಶ್ ಪಾಂಡೆ ತಂಡಕ್ಕೆ ಚೇತರಿಕೆ ನೀಡಿ 86 ರನ್ ಜೊತೆಯಾಟ ಆಡಿದರು. ಧವನ್ ಅರ್ಧಶತಕ ಭಾರಿಸಿದರೆ, ಮನೀಶ್ ಪಾಂಡೆ ಅಮೋಘ ಶತಕ ಚಚ್ಚಿದರು. ಅಕ್ಷರ್ ಪಟೇಲ್, ಗುರುಕೀರತ್ ಸಿಂಗ್ ಮತ್ತು ಅಕ್ಷಯ್ ಕರ್ನೇವಾರ್ ಕೂಡ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು 300 ರನ್ ಗಡಿ ದಾಟಿಸಿ 316 ರನ್ ಮೊತ್ತ ಗಳಿಸಲು ನೆರವಾದರು. ತಮಿಳುನಾಡಿನ ಪರ ಸಾಯಿ ಕಿಶೋರ್ 60 ರನ್ನಿತ್ತು 4 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ಇದಾದ ಬಳಿಕ ಬೃಹತ್ ಗುರಿ ಪಡೆದ ತಮಿಳುನಾಡು ತಂಡ 41ನೇ ಓವರ್'ವರೆಗೂ ಗೆಲುವಿನ ಹಾದಿಯಲ್ಲೇ ಇತ್ತು. ಕೌಷಿಕ್ ಗಾಂಧಿ, ನಾರಾಯಣ್ ಜಗದೀಶನ್, ದಿನೇಶ್ ಕಾರ್ತಿಕ್ ಮತ್ತು ವಿಜಯ್ ಶಂಕರ್ ಉತ್ತಮ ಬ್ಯಾಟಿಂಗ್ ನಡೆಸಿ ತಂಡ ಚೇಸಿಂಗ್'ಗೆ ಶಕ್ತಿ ತುಂಬಿದರು. ಆರಂಭಿಕ ಬ್ಯಾಟ್ಸ್'ಮ್ಯಾನ್ ಕೌಶಿಕ್ ಗಾಂಧಿ ಭರ್ಜರಿ ಶತಕ ಗಳಿಸಿ ಕೊನೆಯ ಕ್ಷಣದವರೆಗೂ ತಮಿಳುನಾಡಿಗೆ ಗೆಲುವಿನ ಆಸೆ ಇತ್ತರು. 42ನೇ ಓವರ್'ನಲ್ಲಿ ವಿಜಯ್ ಶಂಕರ್ ನಿರ್ಗಮನದ ಬಳಿಕ ಕೌಶಿಕ್ ಗಾಂಧಿ ಬಹುತೇಕ ಏಕಾಂಗಿ ಹೋರಾಟ ನಡೆಸಿದರು. 47ನೇ ಓವರ್'ನ ಕೊನೆಯಲ್ಲಿ ಕೌಶಿಕ್ ಔಟಾಗುವುದರೊಂದಿಗೆ ತಮಿಳುನಾಡಿನ ಹೋರಾಟ ಬಹುತೇಕ ಸಮಾಪ್ತಿಯಾಯಿತು.
ಸ್ಕೋರು ವಿವರ:
ಭಾರತ 'ಬಿ' 50 ಓವರ್ 316/8
(ಮನೀಶ್ ಪಾಂಡೆ 104, ಅಕ್ಷರ್ ಪಟೇಲ್ 51, ಶಿಖರ್ ಧವನ್ 50, ಅಕ್ಷಯ್ ಕಾರ್ನೆವಾರ್ ಅಜೇಯ 28, ಗುರುಕೀರತ್ ಸಿಂಗ್ 25 ರನ್ - ಸಾಯಿ ಕಿಶೋರ್ 60/4)
ತಮಿಳುನಾಡು 48.4 ಓವರ್ 284 ರನ್ ಆಲೌಟ್
(ಕೌಶಿಕ್ ಗಾಂಧಿ 124, ಎನ್.ಜಗದೀಶನ್ 64, ದಿನೇಶ್ ಕಾರ್ತಿಕ್ 28, ವಿಜಯ್ ಶಂಕರ್ 27 ರನ್ - ಧವಳ್ ಕುಲಕರ್ಣಿ 45/3, ಅಕ್ಷರ್ ಪಟೇಲ್ 53/3, ಚಾಮಾ ಮಿಲಿಂದ್ 42/2, ಕುಲ್ವಂತ್ ಖೇಜ್ರೋಲಿಯಾ 62/2)
