ಲಾರ್ಡ್ಸ್[ಆ.09]: ಮೊದಲ ಪಂದ್ಯವನ್ನು ಕೇವಲ 31 ರನ್’ಗಳಿಂದ ಸೋತು ಗಾಯಗೊಂಡಿರುವ ಹುಲಿಯಂತಾಗಿರುವ ಟೀಂ ಇಂಡಿಯಾ ಲಾರ್ಡ್ಸ್’ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್’ನಲ್ಲಿ ತಿರುಗೇಟು ನೀಡಲು ಸಜ್ಜಾಗಿದೆ. ಇನ್ನು ಎರಡನೇ ಟೆಸ್ಟ್’ನಲ್ಲೂ ಗೆದ್ದು ಸರಣಿಯಲ್ಲಿ ಇನ್ನಷ್ಟು ಬಿಗಿ ಹಿಡಿತ ಸಾಧಿಸುವ ಇರಾದೆಯಲ್ಲಿದೆ ಇಂಗ್ಲೆಂಡ್ ತಂಡ.

ಇವೆಲ್ಲವುಗಳ ನಡುವೆ ಇಂಗ್ಲೆಂಡ್ ಆಲ್ರೌಂಡರ್ ಸ್ಟುವರ್ಟ್ ಬ್ರಾಡ್ ಅಪರೂಪದ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಇನ್ನು ಬ್ರಾಡ್ ಕೇವಲ 12 ರನ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ಮೂರು ಸಾವಿರ ರನ್ ಬಾರಿಸಿದ ಹಾಗೂ 400+ ವಿಕೆಟ್ ಕಬಳಿಸಿದ ಇಂಗ್ಲೆಂಡ್’ನ ಮೊದಲ ಹಾಘೂ ವಿಶ್ವದ 5ನೇ ಆಲ್ರೌಂಡರ್ ಎನ್ನುವ ದಾಖಲೆಗೆ ಪಾತ್ರರಾಗಲಿದ್ದಾರೆ. ಈಗಾಗಲೇ ಭಾರತದ ಕಪಿಲ್ ದೇವ್, ನ್ಯೂಜಿಲೆಂಡ್’ನ ರಿಚರ್ಡ್ ಹ್ಯಾಡ್ಲಿ, ದಕ್ಷಿಣ ಆಫ್ರಿಕಾದ ಶಾನ್ ಪೊಲ್ಲಾಕ್ ಹಾಗೂ ಆಸ್ಟ್ರೇಲಿಯಾದ ಶೇನ್ ವಾರ್ನ್ ಈ ಸಾಧನೆ ಮಾಡಿದ್ದಾರೆ.   

ಕಪಿಲ್ ದೇವ್ 131 ಟೆಸ್ಟ್ ಪಂದ್ಯಗಳನ್ನಾಡಿ 5.248 ರನ್ ಹಾಗೂ 434 ವಿಕೆಟ್ ಕಬಳಿಸಿದ್ದರೆ, ಹ್ಯಾಡ್ಲಿ 86 ಟೆಸ್ಟ್ ಪಂದ್ಯಗಳಲ್ಲಿ 3,124 ರನ್ ಹಾಗೂ 431 ವಿಕೆಟ್ ಕಬಳಿಸಿದ್ದಾರೆ. ಇನ್ನು ಪೊಲ್ಲಾಕ್ 421 ವಿಕೆಟ್ ಹಾಗೂ 3781 ರನ್ ಪೂರೈಸಿದ್ದರೆ, ವಾರ್ನ್ 145 ಪಂದ್ಯಗಳಲ್ಲಿ 3154 ರನ್ ಹಾಗೂ 708 ವಿಕೆಟ್ ಕಬಳಿಸಿದ್ದಾರೆ.