4ನೇ ಟೆಸ್ಟ್‌ನಲ್ಲಿ ಗೆಲ್ಲಲು 245 ರನ್‌ಗಳ ಗುರಿ ಪಡೆದ ಭಾರತ 184 ರನ್‌ಗಳಿಗೆ ಆಲೌಟ್ ಆಗುವ ಮೂಲಕ 60 ರನ್‌ಗಳ ಸೋಲನುಭವಿಸಿತ್ತು. ಇದರ ಜತೆಗೆ ಇನ್ನೂ ಒಂದು ಪಂದ್ಯ ಇರುವಾಗಲೇ 3-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು.

ಸೌತಾಂಪ್ಟನ್[ಸೆ.04]: ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಸೋತ ಬಳಿಕ ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ವಿದೇಶಿ ನೆಲದಲ್ಲಿ ಆಡುವಾಗ ಕೇವಲ ಸ್ಪರ್ಧಿಸುವ ಮನೋಭಾವ ಇದ್ದರೆ ಸಾಲದು. ಇದರ ಜತೆಗೆ ಒತ್ತಡದ ಪರಿಸ್ಥಿತಿಯನ್ನು ಮೀರಿ ಗೆಲುವಿನ ರೇಖೆ ದಾಟುವ ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದಿದ್ದಾರೆ.

4ನೇ ಟೆಸ್ಟ್‌ನಲ್ಲಿ ಗೆಲ್ಲಲು 245 ರನ್‌ಗಳ ಗುರಿ ಪಡೆದ ಭಾರತ 184 ರನ್‌ಗಳಿಗೆ ಆಲೌಟ್ ಆಗುವ ಮೂಲಕ 60 ರನ್‌ಗಳ ಸೋಲನುಭವಿಸಿತ್ತು. ಇದರ ಜತೆಗೆ ಇನ್ನೂ ಒಂದು ಪಂದ್ಯ ಇರುವಾಗಲೇ 3-1 ಅಂತರದಿಂದ ಸರಣಿಯನ್ನು ಕಳೆದುಕೊಂಡಿತು.

‘ಇನ್ನೇನು ಪಂದ್ಯ ಜಯಿಸೇ ಬಿಟ್ಟೆವು ಎನ್ನುವಷ್ಟರಲ್ಲಿ ಪರಿಸ್ಥಿತಿ ಬೇರೆಯೇ ಆಗಿ ಗೆಲುವು ಕೈ ಜಾರುತ್ತಿದೆ. ನಾವು ಉತ್ತಮ ಆಟ ಆಡಿದೆವು ಎಂಬುದು ನಮಗೆ ತಿಳಿದಿದೆ. ಆದರೆ, ಎಷ್ಟು ಬಾರಿ ಅತ್ಯುತ್ತಮ ಸ್ಪರ್ಧೆಯನ್ನು ಒಡ್ಡಿದೆವು ಎಂದು ಹೇಳಲು ಸಾಧ್ಯ. ನಮಗೆ ಗೆಲುವು ಸಾಧಿಸುವ ಸಾಮರ್ಥ್ಯವಿದೆ. ಇದೇ ಕಾರಣಕ್ಕಾಗಿ ಜಯ ಸಮೀಪ ಆಗಮಿಸುತ್ತಿದ್ದೇವೆ. ಆದರೆ, ಒತ್ತಡ ಹೆಚ್ಚಾದಾಗ ನಾವು ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯ. ಇದರ ಜತೆಗೆ ವಿದೇಶಿ ನೆಲಗಳಲ್ಲಿ ನಿರ್ಭಯವಾಗಿ ಆಡುವ ಮನೋಭಾವ ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪಂದ್ಯದ
ಮೇಲಿನ ಹಿಡಿತ ಕೈಬಿಡಬಾರದು, ಪಟ್ಟು ಸಡಿಲಿಸಬಾರದು’ ಎಂದು ವಿರಾಟ್ ಹೇಳಿದ್ದಾರೆ.