ಬೆಂಗಳೂರು(ಜೂ.16): ವಿಶ್ವದ ಕ್ರೀಡಾಭಿಮಾನಿಗಳ ಚಿತ್ತ ಇದೀಗ ಫಿಫಾ ವಿಶ್ವಕಪ್ ಮೇಲಿದೆ. ಆದರೆ ಕ್ರಿಕೆಟ್ ರಾಷ್ಟ್ರಗಳು ಸದ್ದಿಲ್ಲದೇ 2019ರ ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡಗಳು ಯಾವುದು ಅನ್ನೋ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಪ್ರಶಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿರುವ ನೆಚ್ಚಿನ 4 ತಂಡಗಳ ಮಾಹಿತಿ ಇಲ್ಲಿದೆ.

ಭಾರತ:
ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಈ ಬಾರಿಯ ವಿಶ್ವಕಪ್ ಗೆಲ್ಲೋ ಫೇವರಿಟ್ ತಂಡಗಳಲ್ಲೊಂದು. ಏಕದಿನ ರ‍್ಯಾಂಕಿಂಗ್‌ನಲ್ಲಿ ಭಾರತ 2ನೇ ಸ್ಥಾನದಲ್ಲಿದೆ. 2011ರ ವಿಶ್ವಕಪ್ ಗೆದ್ದ ಭಾರತ 2015ರ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಇನ್ನು ಕೊಹ್ಲಿ ನಾಯಕತ್ವದ ಭಾರತ ತಂಡ 2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತ್ತು.  ಅಗ್ರೆಸ್ಸೀವ್ ನಾಯಕ ಕೊಹ್ಲಿ ಹಾಗೂ ಮಾಜಿ ನಾಯಕ ಎಮ್ ಎಸ್ ಧೋನಿ ಕಾಂಬಿನೇಷನ್ ಕೂಡ ಭಾರತ ತಂಡಕ್ಕೆ ಸಹಕಾರಿಯಾಗಿದೆ.

ಇಂಗ್ಲೆಂಡ್: 
ಕ್ರಿಕೆಟ್ ಜನಕರಾದ ಇಂಗ್ಲೆಂಡ್ ಇದುವರೆಗೂ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿಲ್ಲ. ಈ ಬಾರಿ ಇಂಗ್ಲೆಂಡ್ ವಿಶ್ವಕಪ್ ಟೂರ್ನಿ ಆಯೋಜಿಸುತ್ತಿರುವುದರಿಂದ ಆಂಗ್ಲರಿಗೆ ತವರಿನ ಪಿಚ್ ಲಾಭ ಪಡೆಯೋ ಅವಕಾಶವಿದೆ. ಜೊತೆಗೆ ಏಕದಿನದಲ್ಲಿ ಇಂಗ್ಲೆಂಡ್ ಬಲಿಷ್ಠ ತಂಡ ಅನ್ನೋದರಲ್ಲಿ ಯಾವುದೇ ಅನುಮಾನವಿಲ್ಲ. ಜಾನಿ ಬೈರಿಸ್ಟೋ, ಜೇಸನ್ ರಾಯ್, ಜೋ ರೂಟ್, ಇಯಾನ್ ಮಾರ್ಗನ್ ಸೇರಿದ ಇಂಗ್ಲೆಂಡ್ ತಂಡ ಸಮತೋಲನದಿಂದ ಕೂಡಿದೆ. ಹೀಗಾಗಿ ತವರಿನಲ್ಲಿ ಇತಿಹಾಸ ರಚಿಸೋ ಅವಕಾಶ ಇಂಗ್ಲೆಂಡ್ ಮುಂದಿದೆ.

ನ್ಯೂಜಿಲೆಂಡ್:
2015ರ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದ ನ್ಯೂಜಿಲೆಂಡ್ ತಂಡ, ಈ ಬಾರಿ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ಬ್ರೆಂಡನ್ ಮೆಕ್‌ಕಲಮ್ ನಾಯಕತ್ವದ ನ್ಯೂಜಿಲೆಂಡ್ ಆಕ್ರಣಕಾರಿ ಆಟವಾಡಿ ದಾಖಲೆ ಬರೆದಿತ್ತು. ಇದೀಗ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಮತ್ತಷ್ಟು ಬಲಿಷ್ಠವಾಗಿದೆ. ಕಳೆದ ಬಾರಿ ಕೈತಪ್ಪಿದ ಪ್ರಶಸ್ತಿ ಪಡೆಯಲು ಕಠಿಣ ಹೋರಾಟ ನಡೆಸಲಿದೆ.

ಆಸ್ಟ್ರೇಲಿಯಾ:
ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಯಶಸ್ವಿ ತಂಡ ಆಸ್ಟ್ರೇಲಿಯಾ. 4 ಬಾರಿ ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ 5ನೇ ಬಾರಿ ಚಾಂಪಿಯನ್ ಪಟ್ಟ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಹಾಲಿ ಚಾಂಪಿಯನ್ ಆಸಿಸ್ ತಂಡ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಲ್ಲೂ ಬಲಿಷ್ಠ ತಂಡ ಅನ್ನೋದನ್ನ ಅಲ್ಲಗೆಳೆಯುವಂತಿಲ್ಲ.