ಜೂನ್ 24ರಿಂದ ಇಂಗ್ಲೆಂಡ್'ನಲ್ಲಿ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ವನಿತೆಯರ ಟೀಂ ಇಂಡಿಯಾವನ್ನು ಎದುರಿಸಲಿದೆ.

ದುಬೈ(ಮೇ.05): ಮಹಿಳೆಯರ ಕ್ರಿಕೆಟನ್ನು ಮತ್ತಷ್ಟು ಜನಪ್ರಿಯಗೊಳಿಸಲು ಮುಂದಾಗಿರುವ ಐಸಿಸಿ, ಇದೇ ಜೂನ್‌ 24ರಿಂದ ಆರಂಭಗೊಳ್ಳಲಿರುವ ಏಕದಿನ ವಿಶ್ವಕಪ್‌ ಪ್ರಶಸ್ತಿ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ.

ಕಳೆದ ಬಾರಿ 2 ಲಕ್ಷ ಡಾಲರ್‌ (1.28 ಕೋಟಿ ರೂಪಾಯಿ) ಇದ್ದ ಬಹುಮಾನ ಮೊತ್ತವನ್ನು ಈ ಬಾರಿ 20 ಲಕ್ಷ ಡಾಲರ್‌ (ರೂ.12.84 ಕೋಟಿ)ಗೆ ಏರಿಸಲಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಐಸಿಸಿ ಪ್ರಧಾನ ಕಾರ್ಯದರ್ಶಿ ಡೇವಿಡ್‌ ರಿಚರ್ಡ್‌'ಸನ್‌ ‘‘ಮಹಿಳಾ ಕ್ರಿಕೆಟ್‌'ಗೂ ಸಮಾನತೆ ಹಾಗೂ ಪ್ರಾಮು​ಖ್ಯತೆ ನೀಡುವ ನಿಟ್ಟಿನಲ್ಲಿ ಇದೊಂದು ಪ್ರಮುಖ ಹೆಜ್ಜೆಯಾಗಿದ್ದು, ಈ ಒಂದು ಘೋಷಣೆ ಸಾಕು ನಮ್ಮ ಬದ್ಧತೆ ಏನೆಂಬುದನ್ನು ತಿಳಿಯಲು'' ಎಂದಿದ್ದಾರೆ.

ಜೂನ್ 24ರಿಂದ ಇಂಗ್ಲೆಂಡ್'ನಲ್ಲಿ ಆರಂಭವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ವನಿತೆಯರ ಟೀಂ ಇಂಡಿಯಾವನ್ನು ಎದುರಿಸಲಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೇರಿದಂತೆ ಒಟ್ಟು 8 ತಂಡಗಳು ಪಾಲ್ಗೊಳ್ಳಲಿದ್ದು ಜುಲೈ 23ರಂದು ಲಾರ್ಡ್ಸ್'ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಟೂರ್ನಿಯಲ್ಲಿ ಭಾಗವಹಿಸುವ ಇತರ ತಂಡಗಳೆಂದರೆ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಶ್ರೀಲಂಕಾ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್'ಇಂಡಿಸ್ ಮತ್ತು ಪಾಕಿಸ್ತಾನ.