ಲೀಗ್‌ನಲ್ಲಿ ಅವಧಿ ವಾರಿಯರ್ಸ್, ಮುಂಬೈ ರಾಕೆಟ್ಸ್, ಬೆಂಗಳೂರು ಬ್ಲಾಸ್ಟರ್ಸ್, ದೆಹಲಿ ಏಸರ್ಸ್, ಚೆನ್ನೈ ಸ್ಮಾಶರ್ಸ್ ಮತ್ತು ಹೈದರಾಬಾದ್ ಹಂಟರ್ಸ್ ತಂಡಗಳ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮುಂಬೈ(ಡಿ.30): ವಿಶ್ವದ ಸ್ಟಾರ್ ಶಟ್ಲರ್‌ಗಳು ಒಂದೇ ವೇದಿಕೆಯಲ್ಲಿ ಸೆಣಸುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಮಹಾಯುದ್ಧ ಜ.1 ರಿಂದ 14ರವರೆಗೆ ನಡೆಯಲಿದೆ.

ಮೂರನೇ ಆವೃತ್ತಿಯ ಈ ಲೀಗ್‌ನಲ್ಲಿ 6 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ದೇಶದ ಆರು ಸ್ಥಳಗಳಲ್ಲಿ ನಡೆಯುವ ಈ ಟೂರ್ನಿಯ ಫೈನಲ್ ಪಂದ್ಯ ನವದೆಹಲಿಯಲ್ಲಿ ಆಯೋಜನೆ ಗೊಂಡಿದೆ.

ಹೊಸ ವರ್ಷದ ಆರಂಭದ ದಿನವೇ ಉದ್ಘಾಟನೆಯಾಗಲಿರುವ ಪಂದ್ಯ ಹೈದರಾಬಾದ್‌'ನಲ್ಲಿ ನಡೆಯುತ್ತಿದ್ದು, ಆತಿಥೇಯ ಹೈದರಾಬಾದ್ ತಂಡ, ಚೆನ್ನೈ ಸ್ಮ್ಯಾಶರ್ಸ್ ತಂಡವನ್ನು ಎದುರಿಸಲಿದೆ. ಅದೇ ದಿನ ಮಾಜಿ ಚಾಂಪಿಯನ್ ಬೆಂಗಳೂರು ಬ್ಲಾಸ್ಟರ್ಸ್ ತಂಡ, ಹಾಲಿ ಚಾಂಪಿಯನ್ ದೆಹಲಿ ಏಸರ್ಸ್ ತಂಡದ ಎದುರು ಸೆಣಸಲಿದೆ. ಎರಡು ಸೆಮಿಫೈನಲ್ ಪಂದ್ಯ ಮತ್ತು ಪ್ರಶಸ್ತಿ ಸುತ್ತಿನ ಹಣಾಹಣಿ ನವದೆಹಲಿಯಲ್ಲಿ ನಡೆಯಲಿದೆ.

ಲೀಗ್‌ನಲ್ಲಿ ಅವಧಿ ವಾರಿಯರ್ಸ್, ಮುಂಬೈ ರಾಕೆಟ್ಸ್, ಬೆಂಗಳೂರು ಬ್ಲಾಸ್ಟರ್ಸ್, ದೆಹಲಿ ಏಸರ್ಸ್, ಚೆನ್ನೈ ಸ್ಮಾಶರ್ಸ್ ಮತ್ತು ಹೈದರಾಬಾದ್ ಹಂಟರ್ಸ್ ತಂಡಗಳ ಆಟಗಾರರು ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 5 ಸೆಟ್‌'ಗಳ 11 ಪಾಯಿಂಟ್ಸ್‌'ಗಳ ವ್ಯವಸ್ಥೆಯನ್ನು ಇರುವುದು ಆಟಗಾರರಿಗೆ ಪಂದ್ಯ ರೋಚಕತೆ ಎನಿಸಲಿದೆ. ಈ ವ್ಯವಸ್ಥೆಯಿಂದಾಗಿ ಕುತೂಹಲ ಹೆಚ್ಚಿರುವುದರಿಂದ ವೀಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ ಎನ್ನುವುದು ಆಯೋಜಕರ ಅಭಿಪ್ರಾಯವಾಗಿದೆ.

ಅಲ್ಲದೇ ಮಾಜಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಪಾಯಿಂಟ್ಸ್ ವ್ಯವಸ್ಥೆಯನ್ನು ಸ್ವಾಗತಿಸಿದ್ದಾರೆ. ಈ ವ್ಯವಸ್ಥೆ ಇದ್ದರೇ ಯುವ ಆಟಗಾರರು ಪ್ರಭಾವಿ ಶಟ್ಲರ್ ಎದುರು ಉತ್ತಮ ಆಟದೊಂದಿಗೆ ಜಯ ಸಾಧಿಸಬಹುದಾಗಿದೆ ಎಂದು ಹೇಳಿದ್ದರು. ಸಾಕಷ್ಟು ಕೌತುಕ ಸೃಷ್ಟಿಸಿರುವ ಪಾಯಿಂಟ್ಸ್ ವ್ಯವಸ್ಥೆಯಿಂದ ಆಟ ಬೇಗನೆ ಪೂರ್ಣಗೊಳ್ಳಲಿದ್ದು, ಅಂಕಗಳಿಕೆಗೂ ಇದು ಹೆಚ್ಚು ಸಹಾಯಕಾರಿಯಾಗಿದೆ ಎಂದು ಸೈನಾ ನೆಹ್ವಾಲ್ ತಿಳಿಸಿದ್ದರು.

ಇನ್ನುಳಿದಂತೆ ಮುಂಬೈ, ಲಕ್ನೋ ಮತ್ತು ಬೆಂಗಳೂರಿನಲ್ಲಿ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ. ಜ. 12ರಂದು ರೌಂಡ್ ರಾಬಿನ್ ಹಂತದ ಪಂದ್ಯಗಳು ಕೊನೆಗೊಳ್ಳಲಿವೆ.

ಜ.14ರಂದು ಫೈನಲ್ ಪಂದ್ಯ ನಡೆಯಲಿದೆ. ವಿಶ್ವದ ಪ್ರಮುಖ ಶಟ್ಲರ್‌ಗಳಾದ ಸ್ಪೇನ್‌ನ ಕರೋಲಿನಾ ಮರಿನ್, ಪುರುಷರ ವಿಭಾಗದ ಜಾನ್ ಒ ಜೊರ್ಗೆನ್‌'ಸನ್ ಸೇರಿದಂತೆ ಸಾಕಷ್ಟು ಸ್ಟಾರ್ ಆಟಗಾರರು ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ.

ಹಾಗೆ ಭಾರತದ ಸ್ಟಾರ್ ಆಟಗಾರರಾದ ಸೈನಾ ನೆಹ್ವಾಲ್, ರಿಯೊ ಒಲಿಂಪಿಕ್ಸ್ ಕೂಟದ ಬೆಳ್ಳಿ ವಿಜೇತೆ ಪಿ.ವಿ. ಸಿಂಧು, ಕರ್ನಾಟಕದ ಆಟಗಾರ್ತಿ ಅಶ್ವಿನಿ ಪೊನ್ನಪ್ಪ, ಪಾರುಪಳ್ಳಿ ಕಶ್ಯಪ್, ಕೆ.ಶ್ರೀಕಾಂತ್, ಅಜಯ್ ಜಯರಾಮ್ ಸೇರಿದಂತೆ ಯುವ ಆಟಗಾರರು ವಿದೇಶಿ ಶಟ್ಲರ್‌ಗಳಿಗೆ ಪ್ರಮುಖ ಪೈಪೋಟಿ ನಡೆಸಲು ಕಾತರದಿಂದ ಕಾಯುತ್ತಿದ್ದಾರೆ.

ಪಿಬಿಎಲ್ ವೇಳಾಪಟ್ಟಿ

ಜ.1 ಹೈದರಾಬಾದ್ ಹಂಟರ್ಸ್-ಚೆನ್ನೈ ಸ್ಮಾಶರ್ಸ್

ಬೆಂಗಳೂರು ಬ್ಲಾಸ್ಟರ್ಸ್-ದೆಹಲಿ ಏಸರ್ಸ್ (ಹೈದರಾಬಾದ್)

ಜ.2 ಅವಧಿ ವಾರಿಯರ್ಸ್-ಹೈದರಾಬಾದ್ ಹಂಟರ್ಸ್

ಜ.3 ಬೆಂಗಳೂರು ಬ್ಲಾಸ್ಟರ್ಸ್-ಚೆನ್ನೈ ಸ್ಮಾಶರ್ಸ್

ದೆಹಲಿ ಏಸರ್ಸ್-ಮುಂಬೈ ರಾಕೆಟ್ಸ್

ಜ.4 ಹೈದರಾಬಾದ್ ಹಂಟರ್ಸ್-ಮುಂಬೈ ರಾಕೆಟ್ಸ್ (ಮುಂಬೈ)

ಜ.5 ಅವಧಿ ವಾರಿಯರ್ಸ್-ದೆಹಲಿ ಏಸರ್ಸ್

ಜ.6 ಅವಧಿ ವಾರಿಯರ್ಸ್-ಮುಂಬೈ ರಾಕೆಟ್ಸ್ (ಲಕ್ನೋ)

ಜ.7 ಬೆಂಗಳೂರು ಬ್ಲಾಸ್ಟರ್ಸ್-ಹೈದರಾಬಾದ್ ಹಂಟರ್ಸ್

ಜ.8 ದೆಹಲಿ ಏಸರ್ಸ್-ಚೆನ್ನೈ ಸ್ಮಾಶರ್ಸ್

ಬೆಂಗಳೂರು ಬ್ಲಾಸ್ಟರ್ಸ್-ಮುಂಬೈ ರಾಕೆಟ್ಸ್

ಜ.9 ಅವಧಿ ವಾರಿಯರ್ಸ್-ಬೆಂಗಳೂರು ಬ್ಲಾಸ್ಟರ್ಸ್ (ಬೆಂಗಳೂರು)

ಜ.10 ಮುಂಬೈ ರಾಕೆಟ್ಸ್-ಚೆನ್ನೈ ಸ್ಮಾಶರ್ಸ್

ಜ.11 ಅವಧಿ ವಾರಿಯರ್ಸ್-ಚೆನ್ನೈ ಸ್ಮಾಶರ್ಸ್ (ಚೆನ್ನೈ)

ಜ.12 ದೆಹಲಿ ಏಸರ್ಸ್-ಹೈದರಾಬಾದ್ ಹಂಟರ್ಸ್

ಜ.13 ಸೆಮಿಫೈನಲ್

ಜ.14 ಫೈನಲ್