ಭುವನೇಶ್ವರ(ಡಿ.13): ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯ ಭಾರ ಹೊತ್ತಿರುವ ಭಾರತ ಹಾಕಿ ತಂಡ, ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಗುರುವಾರ ಬಲಿಷ್ಠ ನೆದರ್‌ಲೆಂಡ್ಸ್‌ ವಿರುದ್ಧ ಸೆಣಸಲಿದೆ. 43 ವರ್ಷಗಳ ಬಳಿಕ ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿರುವ ಭಾರತಕ್ಕೆ ಅಸಲಿ ಸವಾಲು ಈಗ ಆರಂಭಗೊಳ್ಳಲಿದ್ದು, 3 ಬಾರಿಯ ವಿಶ್ವ ಚಾಂಪಿಯನ್‌ ತಂಡವನ್ನು ಸೋಲಿಸುವುದು ಮಾತಿನಲ್ಲಿ ಹೇಳಿದಷ್ಟುಸುಲಭವಲ್ಲ ಎನ್ನುವ ಅರಿವು ತಂಡಕ್ಕಿದೆ.

1975ರಲ್ಲಿ ಮೊದಲ ಬಾರಿಗೆ ಟ್ರೋಫಿ ಗೆದ್ದಿದ್ದ ಭಾರತ, ಆ ಬಳಿಕ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಪ್ರವೇಶಿಸಿಲ್ಲ. ಇತ್ತೀಚಿನ ದಿನಗಳಲ್ಲಿ ತಂಡ ಆಟದ ಗುಣಮಟ್ಟಪ್ರಗತಿ ಕಂಡಿದ್ದರೂ, ಇತಿಹಾಸ ಭಾರತದ ವಿರುದ್ಧವಾಗಿದೆ. ವಿಶ್ವಕಪ್‌ನಲ್ಲಿ ಭಾರತ ತಂಡ ನೆದರ್‌ಲೆಂಡ್ಸ್‌ ವಿರುದ್ಧ ಗೆಲುವನ್ನೇ ಸಾಧಿಸಿಲ್ಲ. ಈ ವರೆಗೂ ಆಡಿರುವ 6 ಪಂದ್ಯಗಳಲ್ಲಿ 5ರಲ್ಲಿ ಸೋಲುಂಡರೆ, 1 ಪಂದ್ಯ ಡ್ರಾಗೊಂಡಿತ್ತು. ಒಂದೊಮ್ಮೆ ಮನ್‌ಪ್ರೀತ್‌ ಸಿಂಗ್‌ ಪಡೆ ಡಚ್‌ ವಿರುದ್ಧ ಗುರುವಾರ ಜಯಭೇರಿ ಬಾರಿಸಿದರೆ ಇತಿಹಾಸದ ಪುಟಗಳಲ್ಲಿ ಹೊಸ ಅಧ್ಯಾಯ ಬರೆಯಲಿದೆ.

ಸಮಬಲ ಹೋರಾಟ ನಿರೀಕ್ಷೆ: ರ‍್ಯಾಂಕಿಂಗ್ ಆಧಾರದಲ್ಲಿ ಭಾರತ ಹಾಗೂ ನೆದರ್‌ಲೆಂಡ್ಸ್‌ ನಡುವೆ ಹೆಚ್ಚಿನ ಅಂತರವಿಲ್ಲ. ಡಚ್‌ ತಂಡ ವಿಶ್ವ ರಾರ‍ಯಂಕಿಂಗ್‌ನಲ್ಲಿ ಸದ್ಯ 4ನೇ ಸ್ಥಾನದಲ್ಲಿದ್ದರೆ, ಭಾರತ 5ನೇ ಸ್ಥಾನದಲ್ಲಿದೆ. ಕೊನೆ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದು ಇದೇ ವರ್ಷ ಜೂನ್‌-ಜುಲೈನಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿಯಲ್ಲಿ. ಭಾರೀ ರೋಚಕತೆಯಿಂದ ಕೂಡಿದ್ದ ಪಂದ್ಯ 1-1 ಗೋಲುಗಳಲ್ಲಿ ಡ್ರಾಗೊಂಡಿತ್ತು.

ಒಟ್ಟಾರೆ ಮುಖಾಮುಖಿಯನ್ನು ಗಮನಿಸಿದರೆ ನೆದರ್‌ಲೆಂಡ್ಸ್‌, ಭಾರತದ ವಿರುದ್ಧ ಪ್ರಾಬಲ್ಯ ಮೆರೆದಿದೆ. ಉಭಯ ತಂಡಗಳು 105 ಪಂದ್ಯಗಳಲ್ಲಿ ಸೆಣಸಿದ್ದು, ಭಾರತ 33ರಲ್ಲಿ ಗೆದ್ದರೆ, ನೆದರ್‌ಲೆಂಡ್ಸ್‌ 48ರಲ್ಲಿ ಜಯಗಳಿಸಿದೆ. ಇನ್ನುಳಿದ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಆದರೆ, 2013ರಿಂದ ಈಚೆಗೆ ಸಮಬಲದ ಪೈಪೋಟಿ ಕಂಡುಬಂದಿದೆ. ಭಾರತ-ನೆದರ್‌ಲೆಂಡ್ಸ್‌ 9 ಪಂದ್ಯಗಳಲ್ಲಿ ಎದುರಾಗಿದ್ದು, ತಲಾ 4 ಗೆಲುವು ಸಾಧಿಸಿವೆ. 1 ಪಂದ್ಯ ಡ್ರಾನಲ್ಲಿ ಮುಕ್ತಾಯಗೊಂಡಿತ್ತು.

ಆಕ್ರಮಣಕಾರಿ ಆಟಕ್ಕೆ ಒತ್ತು: ಭಾರತ ಹಾಗೂ ಡಚ್‌ ನಡುವಿನ ಪಂದ್ಯದಲ್ಲಿ ವೇಗ ಹಾಗೂ ಆಕ್ರಮಣಕಾರಿ ಆಟವನ್ನು ಎದುರು ನೋಡಬಹುದಾಗಿದೆ. ಎರಡೂ ತಂಡಗಳು ತಮ್ಮ ಗೋಲು ಬಾರಿಸುವ ಸಾಮರ್ಥ್ಯದ ಮೇಲೆಯೇ ಪಂದ್ಯ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿವೆ. ಉಭಯ ತಂಡಗಳು ಗುಂಪು ಹಂತದಲ್ಲಿ ಭರ್ಜರಿ ಗೋಲು ದಾಖಲಿಸಿದವು. ಭಾರತ 12 ಗೋಲು ಬಾರಿಸಿ 3 ಗೋಲು ಬಿಟ್ಟುಕೊಟ್ಟರೆ, ನೆದರ್‌ಲೆಂಡ್ಸ್‌ 18 ಗೋಲು ಬಾರಿಸಿ 5 ಗೋಲುಗಳನ್ನು ಬಿಟ್ಟುಕೊಟ್ಟಿತು. ಭಾರತ, ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದರೆ, ‘ಡಿ’ ಗುಂಪಿನಲ್ಲಿದ್ದ ನೆದರ್‌ಲೆಂಡ್ಸ್‌ ತಂಡ ಜರ್ಮನಿ ವಿರುದ್ಧ ಸೋತ ಕಾರಣ, 2ನೇ ಸ್ಥಾನ ಪಡೆದು ಕ್ವಾರ್ಟರ್‌ಫೈನಲ್‌ಗೆ ಅರ್ಹತೆ ಪಡೆಯಲು ಕ್ರಾಸ್‌ ಓವರ್‌ ಪಂದ್ಯವನ್ನಾಡಬೇಕಾಯಿತು.

ನಾಯಕ ಬಿಲ್ಲಿ ಬಾಕರ್‌, ಸೀವ್‌ ವಾನ್‌, ಜೆರೋನ್‌ ಹಟ್‌್ರ್ಜಬರ್ಗರ್‌, ರಾಬರ್ಟ್‌ ಕೆಂಪರ್ಮನ್‌, ಥಿಯೆರಿ ಬ್ರಿಂಕ್ಮನ್‌ರಂತಹ ಅನುಭವಿ ಸ್ಟೆ್ರೖಕರ್‌ ಹಾಗೂ ಮಿಡ್‌ಫೀಲ್ಡರ್‌ಗಳನ್ನು ಹೊಂದಿರುವ ನೆದರ್‌ಲೆಂಡ್ಸ್‌ ತಂಡದಿಂದ ಭಾರತದ ರಕ್ಷಣಾ ಪಡೆಗೆ ಭಾರೀ ಸವಾಲು ಎದುರಾಗಲಿದೆ.

ಮತ್ತೊಂದೆಡೆ ಭಾರತ ತನ್ನ ಫಾರ್ವರ್ಡ್‌ ಆಟಗಾರರಾದ ಮನ್‌ದೀಪ್‌ ಸಿಂಗ್‌, ಸಿಮ್ರನ್‌ಜೕತ್‌, ಲಲಿತ್‌ ಉಪಾಧ್ಯಾಯ ಹಾಗೂ ಆಕಾಶ್‌ದೀಪ್‌ ಮೇಲೆ ಭಾರೀ ನಿರೀಕ್ಷೆಯಿರಿಸಿದೆ. ಇಲ್ಲಿನ ಕಳಿಂಗಾ ಕ್ರೀಡಾಂಗಣ ತುಂಬಿ ತುಳುಕಲಿದ್ದು, ತವರಿನ ಅಭಿಮಾನಿಗಳ ಮುಂದೆ ಉತ್ತಮ ಪ್ರದರ್ಶನ ತೋರುವ ಒತ್ತಡ ಭಾರತೀಯರ ಮೇಲೆ ಇರಲಿದೆ.

ಭಾರತದ ಕ್ವಾರ್ಟರ್‌ ಹಾದಿ

ಎದುರಾಳಿ    ಫಲಿತಾಂಶ
ದ.ಆಫ್ರಿಕಾ    5-0 ಜಯ
ಬೆಲ್ಜಿಯಂ    2-2 ಡ್ರಾ
ಕೆನಡಾ    5-1 ಜಯ

ಡಚ್‌ ಕ್ವಾರ್ಟರ್‌ ಹಾದಿ

ಎದುರಾಳಿ    ಫಲಿತಾಂಶ
ಮಲೇಷ್ಯಾ    7-0 ಜಯ
ಜರ್ಮನಿ    1-4 ಸೋಲು
ಪಾಕಿಸ್ತಾನ    5-1 ಜಯ
ಕೆನಡಾ    5-0 ಜಯ

ಒಟ್ಟು ಮುಖಾಮುಖಿ: 105
ಭಾರತ: 33
ಡಚ್‌: 48
ಡ್ರಾ: 24

ವಿಶ್ವ ರ‍್ಯಾಂಕಿಂಗ್
ಭಾರತ: 05
ನೆದರ್‌ಲೆಂಡ್ಸ್‌: 04

ನಮ್ಮ ವಿರುದ್ಧ ನೆದರ್‌ಲೆಂಡ್ಸ್‌ ಉತ್ತಮ ದಾಖಲೆ ಹೊಂದಿದೆ. ಆದರೆ ಇತ್ತೀಚೆಗಷ್ಟೇ ಅವರ ವಿರುದ್ಧ ಆಡಿ ಡ್ರಾ ಮಾಡಿಕೊಂಡೆದ್ದೆವು. ಭಾರತ ತಂಡದ ಪ್ರದರ್ಶನ ದೊಡ್ಡ ಮಟ್ಟದಲ್ಲಿ ಸುಧಾರಣೆ ಕಂಡಿದೆ. ಭಾರೀ ಪೈಪೋಟಿ ನಿರೀಕ್ಷೆ ಮಾಡುತ್ತಿದ್ದೇವೆ. ಉತ್ತಮವಾಗಿ ಆಡುವ ತಂಡಕ್ಕೆ ಗೆಲುವು ಒಲಿಯಲಿದೆ ಎಂದು ಭಾರತ ತಂಡದ ನಾಯಕ ಮನ್‌ಪ್ರೀತ್‌ ಸಿಂಗ್‌ ಹೇಳಿದ್ದಾರೆ.

ನಾವು ಸದಾ ನಮ್ಮದೇ ವೇಗದಲ್ಲಿ ಆಡಲು ಪ್ರಯತ್ನಿಸುತ್ತೇವೆ. ವೇಗ ಇಲ್ಲವೇ ನಿಧಾನ ಗತಿಯಾಗಿರಬಹುದು, ಎದುರಾಳಿಯ ಮೇಲೆ ಪ್ರಾಬಲ್ಯ ಸಾಧಿಸುವುದು ನಮ್ಮ ಗುರಿಯಾಗಿರುತ್ತದೆ. ಭಾರತ ತಂಡದ ಬಗ್ಗೆ ನಮಗೆ ಯೋಚನೆಯಿಲ್ಲ. ಅವರ ರಣತಂತ್ರಗಳನ್ನು ನಮ್ಮಿಂದ ತಪ್ಪಿಸಲು ಸಾಧ್ಯವಿಲ್ಲ ಎಂದು ನೆದರ್‌ಲೆಂಡ್ಸ್‌ ತಂಡದ ನಾಯಕ ಬಿಲ್ಲಿ ಬಾಕರ್‌ ಹೇಳಿದ್ದಾರೆ.