ಬಿಗ್‌'ಬ್ಯಾಶ್‌'ನಲ್ಲಿ ಹರ್ಮನ್‌ಪ್ರೀತ್‌, ಸಿಡ್ನಿ ಥಂಡರ್‌ ತಂಡವನ್ನು ಪ್ರತಿನಿಧಿಸಿದ್ದರು.
ಮುಂಬೈ(ಮೇ.28): ಆಸ್ಪ್ರೇಲಿಯಾದ ಮಹಿಳಾ ಬಿಗ್ ಬ್ಯಾಶ್ ಲೀಗ್'ನಲ್ಲಿ ಆಡಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದ ಸ್ಟಾರ್ ಆಲ್ರೌಂಡರ್ ಹರ್ಮನ್ಪ್ರೀತ್ ಕೌರ್, ಇಂಗ್ಲೆಂಡ್'ನಲ್ಲಿ ನಡೆಯಲಿರುವ ಮಹಿಳಾ ಟಿ20 ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಸರ್ರೆ ಸ್ಟಾರ್ಸ್ ತಂಡದಲ್ಲಿ ಹರ್ಮನ್ಪ್ರೀತ್ ಆಡುವ ವಿಚಾರವನ್ನು ಬಿಸಿಸಿಐ ಖಚಿತಪಡಿಸಿದೆ.
ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಸಂಸ್ಥೆ (ಇಸಿಬಿ) ನಡೆಸುವ ಟಿ20 ಪಂದ್ಯಾವಳಿ ಇದಾಗಿದ್ದು, 6 ತಂಡಗಳು ಪಾಲ್ಗೊಳ್ಳಲಿವೆ. ಆಗಸ್ಟ್ 10ರಿಂದ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಲೀಗ್ ಹಂತದಲ್ಲಿ 6 ತಂಡಗಳು ತಲಾ ಒಮ್ಮೆ ಮುಖಾಮುಖಿಯಾಗಲಿವೆ. ಅಗ್ರಸ್ಥಾನ ಪಡೆಯುವ ತಂಡ, ನೇರವಾಗಿ ಫೈನಲ್ ಪ್ರವೇಶಿಸಿದರೆ 2ನೇ ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು, ಫೈನಲ್ ಸ್ಥಾನಕ್ಕಾಗಿ ಸೆಣಸಾಡಲಿವೆ ಎಂದು ಟೂರ್ನಿಯ ಮಾದರಿಯನ್ನು ಆಯೋಜಕರು ತಿಳಿಸಿದ್ದಾರೆ.
ಬಿಗ್'ಬ್ಯಾಶ್'ನಲ್ಲಿ ಹರ್ಮನ್ಪ್ರೀತ್, ಸಿಡ್ನಿ ಥಂಡರ್ ತಂಡವನ್ನು ಪ್ರತಿನಿಧಿಸಿದ್ದರು. 12 ಇನ್ನಿಂಗ್ಸ್ಗಳಲ್ಲಿ 59.20 ಸರಾಸರಿಯೊಂದಿಗೆ 296 ರನ್ ಕಲೆಹಾಕುವ ಮೂಲಕ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿದ್ದ ಭಾರತ ಟಿ20 ತಂಡದ ನಾಯಕಿ, ಬೌಲಿಂಗ್'ನಲ್ಲಿ 6 ವಿಕೆಟ್'ಗಳನ್ನೂ ಕಬಳಿಸಿದ್ದರು. ಸಿಡ್ನಿ ಥಂಡರ್ ತಂಡ ಪಂದ್ಯಾವಳಿಯ ಶ್ರೇಷ್ಠ ಆಟಗಾರ್ತಿ ಗೌರವವನ್ನು ಹರ್ಮನ್'ಪ್ರೀತ್'ಗೆ ನೀಡಿತ್ತು.
