ಯುವ ಪ್ರತಿಭೆ ಕರಣ್ ನಾಯರ್'ಗೆ ಅವಕಾಶ ಕಲ್ಪಿಸದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ನವದೆಹಲಿ(ಜ.07): ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಶುಕ್ರವಾರವಷ್ಟೇ ತಂಡವನ್ನು ಪ್ರಕಟಿಸಲಾಗಿದೆ. ಈ ವೇಳೆ ಕನ್ನಡಿಗ ಹಾಗೂ ಆಂಗ್ಲರ ಎದುರು ಅಂತಿಮ ಟೆಸ್ಟ್'ನಲ್ಲಿ ತ್ರಿಶತಕ ಸಿಡಿಸಿದ ಕರಣ್ ನಾಯರ್'ಗೆ ಸೀಮಿತ ಓವರ್'ಗಳ ಸರಣಿಗೆ ಅವಕಾಶ ನೀಡದೇ ಇರುವುದು ಸಾಕಷ್ಟು ಜನರನ್ನು ಹುಬ್ಬೇರುವಂತೆ ಮಾಡಿದೆ.

ಈ ಸರಣಿಗೆ ಹೊಸಮುಖಗಳಾದ ದೆಹಲಿಯ ಆರಂಭಿಕ ಆಟಗಾರ ರಿಷಭ್ ಪಂತ್ ಸೇರಿದಂತೆ ಮನ್ದೀಪ್ ಸಿಂಗ್ ಹಾಗೂ ಯಜುವೇಂದ್ರ ಚಾಹಲ್'ಗೆ ಅವಕಾಶ ನೀಡಲಾಗಿದೆ. ಆದರೆ ಯುವ ಪ್ರತಿಭೆ ಕರಣ್ ನಾಯರ್'ಗೆ ಅವಕಾಶ ಕಲ್ಪಿಸದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ಈ ಕುರಿತಂತೆ ಆಯ್ಕೆದಾರರ ನಿರ್ಧಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ಭಾರತದ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್, 'ಕರಣ್ ನಾಯರ್ ಎಲ್ಲಿ? ಇಂಗ್ಲೆಂಡ್ ವಿರುದ್ಧ ತ್ರಿಶತಕ ಸಿಡಿಸಿದ ಪ್ರತಿಭೆಗೆ ಅಭ್ಯಾಸ ಪಂದ್ಯವನ್ನಾಡಲೂ ಅವಕಾಶ ಕೊಡದೇ ಇರುವುದು ಅಚ್ಚರಿ ಮೂಡಿಸುತ್ತಿದೆ' ಎಂದು ಆಯ್ಕೆ ಸಮಿತಿಯನ್ನು ಲೇವಡಿ ಮಾಡಿದ್ದಾರೆ.

ಇದು ವಿವಾದವಾಗುವ ಸಾಧ್ಯತೆಯನ್ನು ಮನಗಂಡು ಭಜ್ಜಿ ಈ ಟ್ವೀಟ್'ನ್ನು ಕೆಲವೇ ನಿಮಿಷಗಳಲ್ಲಿ ಅಳಿಸಿ ಹಾಕಿದ್ದಾರೆ ಎಂದು ಸ್ಪೋರ್ಟ್ಸ್ ಕೆಫೆ ವರದಿ ಮಾಡಿದೆ.