ಗೆಲ್ಲಲು 235 ರನ್‌'ಗಳ ಗುರಿ ಪಡೆದ ಜಾರ್ಖಂಡ್, ಭಾರತ ಟಿ20 ತಂಡದ ಪ್ರಭಾವಿ ಬೌಲರ್ ಜಸ್ಪ್ರೀತ್ ಬುಮ್ರಾ (29ಕ್ಕೆ 6) ಅವರ ಮಾರಕ ದಾಳಿಗೆ ಸಿಕ್ಕಿ ಸೋಲಪ್ಪಿತು.

ನಾಗ್ಪುರ(ಜ.04): ಮಹತ್ವದ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದರೂ, ಅದರ ಫಲವನ್ನು ಪಡೆಯುವಲ್ಲಿ ಜಾರ್ಖಂಡ್ ವಿಫಲವಾಯಿತಲ್ಲದೆ, ಈ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯ ತನ್ನ ಅಭಿಯಾನವನ್ನು ಉಪಾಂತ್ಯಕ್ಕೆ ಮುಗಿಸಿದೆ.

ಇಲ್ಲಿನ ವಿದರ್ಭ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ನಾಲ್ಕನೇ ದಿನದಂದೇ ಪಾರ್ಥೀವ್ ಪಟೇಲ್ ಸಾರಥ್ಯದ ಗುಜರಾತ್ 123 ರನ್‌'ಗಳಿಂದ ಜಾರ್ಖಂಡ್‌'ಗೆ ಸೋಲುಣಿಸಿ ಐತಿಹಾಸಿಕ ಗೆಲುವು ಪಡೆಯಿತಲ್ಲದೆ, ಬರೋಬ್ಬರಿ 67 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿಗೆ ಧಾವಿಸಿತು. ಈ ಮುನ್ನ 1950ರಲ್ಲಿ ಫೈನಲ್ ತಲುಪಿದ್ದ ಗುಜರಾತ್, ಆಗ ಹೋಳ್ಕರ್ ವಿರುದ್ಧ ಸೋಲಪ್ಪಿ ರನ್ನರ್‌'ಅಪ್ ಸ್ಥಾನಕ್ಕೆ ತೃಪ್ತವಾಗಿತ್ತು.

ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ಹಾಗೂ ಮುಂಬೈ ಸೆಣಸುತ್ತಿದ್ದು, ಗೆದ್ದ ತಂಡದೊಟ್ಟಿಗೆ ಗುಜರಾತ್ ಫೈನಲ್‌'ನಲ್ಲಿ ಕಾದಾಡಲಿದೆ. ಅಂದಹಾಗೆ ಪ್ರಶಸ್ತಿ ಸುತ್ತಿನ ಪಂದ್ಯವು ಇದೇ ತಿಂಗಳು 10ರಿಂದ 14ರವರೆಗೆ ಇಂದೋರ್‌'ನ ಹೋಳ್ಕರ್ ಮೈದಾನದಲ್ಲಿ ಜರುಗಲಿದೆ.

ಗೆಲ್ಲಲು 235 ರನ್‌'ಗಳ ಗುರಿ ಪಡೆದ ಜಾರ್ಖಂಡ್, ಭಾರತ ಟಿ20 ತಂಡದ ಪ್ರಭಾವಿ ಬೌಲರ್ ಜಸ್ಪ್ರೀತ್ ಬುಮ್ರಾ (29ಕ್ಕೆ 6) ಅವರ ಮಾರಕ ದಾಳಿಗೆ ಸಿಕ್ಕಿ ಸೋಲಪ್ಪಿತು. ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಉರುಳಿಸಿದ್ದ ಭಾರತದ ಹಿರಿಯ ವೇಗದ ಬೌಲರ್ ಆರ್.ಪಿ. ಸಿಂಗ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪ್ರಮುಖ ಮೂರು ವಿಕೆಟ್‌ಗಳನ್ನು ಪಡೆದು ತಂಡಕ್ಕೆ ಐತಿಹಾಸಿಕ ಗೆಲುವು ತಂದಿತ್ತರು. ಈ ಇಬ್ಬರ ಪ್ರಖರ ದಾಳಿಗೆ ಕಂಗೆಟ್ಟ ಜಾರ್ಖಂಡ್ ಕೇವಲ 111 ರನ್‌'ಗಳಿಗೆ ಸರ್ವಪತನ ಕಂಡು ಟೂರ್ನಿಯಿಂದ ಹಿಮ್ಮೆಟ್ಟಿತು.

ಜಯದ ಹಾದಿಯಲ್ಲಿ ವಿರಾಟ್ ಸಿಂಗ್ (17), ನಾಯಕ ಸೌರಭ್ ತಿವಾರಿ (17) ಹಾಗೂ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ ಶತಕ ದಾಖಲಿಸಿದ್ದ ಇಶಾನ್ ಕಿಶನ್ (19), ಕೌಶಲ್ ಸಿಂಗ್ (24) ಮತ್ತು ವಿಕಾಸ್ ಸಿಂಗ್ 18 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲು ವಿಫಲವಾದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಮೊದಲ ಇನ್ನಿಂಗ್ಸ್: 390

ಜಾರ್ಖಂಡ್ ಮೊದಲ ಇನ್ನಿಂಗ್ಸ್: 408

ಗುಜರಾತ್ ದ್ವಿತೀಯ ಇನ್ನಿಂಗ್ಸ್: 252

ಜಾರ್ಖಂಡ್ ದ್ವಿತೀಯ ಇನ್ನಿಂಗ್ಸ್: 111

ಫಲಿತಾಂಶ: ಗುಜರಾತ್‌'ಗೆ 123 ರನ್ ಗೆಲುವು

ಪಂದ್ಯಶ್ರೇಷ್ಠ: ಜಸ್ಪ್ರೀತ್ ಬುಮ್ರಾ