ಇನಿಂಗ್ಸ್ ಮುಕ್ತಾಯದವರೆಗೂ ಅಜೇಯರಾಗುಳಿದು ಭರ್ಜರಿಯಾಗಿ ಬ್ಯಾಟ್ ಬೀಸಿದ ಗೌತಮ್, ಕರ್ನಾಟಕ ತಂಡ ಸಮಾಧಾನಕರ ಮೊತ್ತ ಪೇರಿಸುವಲ್ಲಿ ನೆರವಾದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿದಂತೆ 60 ರನ್ ಚಚ್ಚಿದ ಅವರಿಗೆ ಇತರರಿಂದ ಹೆಚ್ಚಿನ ನೆರವು ದೊರೆಯದಿದ್ದರೂ ತಮ್ಮ ಧೀರೋದಾತ್ತ ಬ್ಯಾಟಿಂಗ್ ಮೂಲಕ ಅವರು ತಂಡಕ್ಕೆ ನೆರವಾದರು.

ವಡೋದರಾ(ನ.05): ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಕೆ. ಗೌತಮ್ ಅವರ ಅಜೇಯ ಅರ್ಧಶತಕ (59 ಎಸೆತ, 6 ಬೌಂಡರಿ, 2 ಸಿಕ್ಸರ್) ಹಾಗೂ ರಾಬಿನ್ ಉತ್ತಪ್ಪ ಅವರ ಸಮಯೋಚಿತ ಬ್ಯಾಟಿಂಗ್‌ನ ನೆರವಿನಿಂದಾಗಿ ಕರ್ನಾಟಕ ತಂಡ, ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 267 ರನ್ ಮಾತ್ರ ಗಳಿಸಲು ಶಕ್ತವಾಯಿತು. ಆನಂತರ, ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ವಡೋದರಾ, ದಿನಾಂತ್ಯದ ಹೊತ್ತಿಗೆ ತನ್ನ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.

ಇಲ್ಲಿನ ಮೋತಿ ಬಾಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ವಡೋದರಾ ತಂಡದ ನಾಯಕ ಜಲ್, ಕರ್ನಾಟಕ ತಂಡವನ್ನು ಮೊದಲಿಗೆ ಕಣಕ್ಕಿಳಿಸಿದರು. ಅದರಂತೆ ಮೊದಲು ಕ್ರೀಸ್‌ಗೆ ಇಳಿದ ಕರ್ನಾಟಕ ತಂಡವು ಆರಂಭದಲ್ಲೇ ಬೆಚ್ಚಿ ಬೀಳುವಂತಾಯಿತು. ಕೇವಲ 1 ರನ್ ಮೊತ್ತಕ್ಕೇ ಆರಂಭಿಕ ಮಯಾಂಕ್ ಅವರನ್ನು ಕಳೆದುಕೊಂಡ ರಾಜ್ಯ ತಂಡ, ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಆರಂಭಿಕ ಸಮರ್ಥ್ ಅವರನ್ನೂ ಕಳೆದುಕೊಂಡಿತು. ರಾಜ್ಯ ತಂಡದ ಆರಂಭಿಕರಾದ ಸಮರ್ಥ್ ಹಾಗೂ ಮಯಾಂಕ್ ಅಗರ್ವಾಲ್ ಅವರು ನೀಡಿದ ಕ್ಯಾಚ್‌ಗಳನ್ನು ಯಶಸ್ವಿಯಾಗಿ ಹಿಡಿದ ವಿದರ್ಭ ತಂಡದಲ್ಲಿನ ಕನ್ನಡಿಗ ಗಣೇಶ್ ಸತೀಶ್, ಕರ್ನಾಟಕ ಪಡೆಗೆ ಒಂದರ ಹಿಂದೊಂದರಂತೆ ಪೆಟ್ಟು ನೀಡಿದರು.

ಹೀಗೆ, ಕೇವಲ 37 ರನ್ ಮೊತ್ತಕ್ಕೆ ಎರಡು ವಿಕೆಟ್ ಕಳೆದುಕೊಂಡ ಕರ್ನಾಟಕಕ್ಕೆ ಆಗ ಆಸರೆಯಾಗಿದ್ದು ಮೂರನೇ ಕ್ರಮಾಂಕದಲ್ಲಿ ಆಡಲಿಳಿದಿದ್ದ ರಾಬಿನ್ ಉತ್ತಪ್ಪ. ಅವರಿಗೆ ಆಗ ಜತೆಯಾಗಿದ್ದು ಮಯಾಂಕ್ ಅಗರ್ವಾಲ್. ಈ ಜೋಡಿ, ಇನಿಂಗ್ಸ್‌ಗೆ ಕೊಂಚ ನೆರವಾಯಿತಾದರೂ ನಾಲ್ಕನೇ ವಿಕೆಟ್‌ಗೆ 25 ರನ್ ಪೇರಿಸುವಷ್ಟರಲ್ಲಿ ಉತ್ತಪ್ಪ ನಿರ್ಗಮಿಸುವ ಮೂಲಕ ಬೇರ್ಪಟ್ಟಿತು. ವೈಯಕ್ತಿಕವಾಗಿ 46 ರನ್ ಗಳಿಸಿದ ಉತ್ತಪ್ಪ ಕೇವಲ 4 ರನ್‌ಗಳಲ್ಲಿ ಅರ್ಧಶತಕ ಗಳಿಸುವ ಅವಕಾಶದಿಂದ ವಂಚಿತರಾದರು.

ರಾಬಿನ್ ನಿರ್ಗಮನದ ಬೆನ್ನಲ್ಲೇ ಪಾಂಡೆ ಸಹ ಪೆವಿಲಿಯನ್‌ನತ್ತ ಮುಖ ಮಾಡಿದರು. ಆನಂತರ ಬಂದ ಸ್ಟುವರ್ಟ್ ಬಿನ್ನಿ, ಸಿಎಂ ಗೌತಮ್, ಶ್ರೇಯಸ್ ಗೋಪಾಲ್ ಅವರೂ ಸಂಪೂರ್ಣ ವಿಫಲರಾಗಿದ್ದು ಕರ್ನಾಟಕದ ಪಾಳಯದಲ್ಲಿ ದುಗುಡದ ವಾತಾವರಣ ಸೃಷ್ಟಿಸಿತು.

ಗೌತಮ್ ಭರ್ಜರಿ ಬ್ಯಾಟಿಂಗ್

ಅಂತಿಮ ಹಂತದಲ್ಲಿ ವಿನಯ್ ಕುಮಾರ್ ಹಾಗೂ ಕಾಜಿ ಜೋಡಿ 8ನೇ ವಿಕೆಟ್‌ಗೆ 37 ರನ್ ಪೇರಿಸಿದರೆ, 8ನೇ ವಿಕೆಟ್‌ಗೆ ಜತೆಯಾದ ಕಾಜಿ-ಕೆ. ಗೌತಮ್ 32 ರನ್ ಪೇರಿಸಿದರು. ತಂಡದ ಮೊತ್ತ 189 ರನ್ ಆಗಿದ್ದಾಗ ಕಾಜಿ ಔಟಾದರು. ಅಲ್ಲಿಂದ ಮುಂದಕ್ಕೆ ಇನಿಂಗ್ಸ್ ಮುಕ್ತಾಯದವರೆಗೂ ಅಜೇಯರಾಗುಳಿದು ಭರ್ಜರಿಯಾಗಿ ಬ್ಯಾಟ್ ಬೀಸಿದ ಗೌತಮ್, ಕರ್ನಾಟಕ ತಂಡ ಸಮಾಧಾನಕರ ಮೊತ್ತ ಪೇರಿಸುವಲ್ಲಿ ನೆರವಾದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸೇರಿದಂತೆ 60 ರನ್ ಚಚ್ಚಿದ ಅವರಿಗೆ ಇತರರಿಂದ ಹೆಚ್ಚಿನ ನೆರವು ದೊರೆಯದಿದ್ದರೂ ತಮ್ಮ ಧೀರೋದಾತ್ತ ಬ್ಯಾಟಿಂಗ್ ಮೂಲಕ ಅವರು ತಂಡಕ್ಕೆ ನೆರವಾದರು.

ಸಂಕ್ಷಿಪ್ತ ಸ್ಕೋರ್

ಕರ್ನಾಟಕ ಪ್ರಥಮ ಇನಿಂಗ್ಸ್ 267 (ಕೆ. ಗೌತಮ್ 60, ರಾಬಿನ್ ಉತ್ತಪ್ಪ 46; ಲಲಿತ್ ಯಾದವ್ 67ಕ್ಕೆ 5, ರವಿಕುಮಾರ್ 54ಕ್ಕೆ 3).