ಟಿ20 ಕ್ರಿಕೆಟ್‌'ನ ಸಾಮ್ರಾಟ, 10 ಸಹಸ್ರ ರನ್‌ ಸರದಾರ ಕ್ರಿಸ್‌ ಗೇಲ್‌, ಭಾರತದಲ್ಲಿ ಹೊಸ ವೃತ್ತಿಬದುಕು ಕಟ್ಟಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಲವು ಉದ್ಯಮಗಳಲ್ಲಿ ಹಣಹೂಡಿಕೆ ಮಾಡಿ ಕ್ರಿಕೆಟ್‌ ನಂತರದ ಬದುಕಿಗೆ ತಯಾರಾಗುತ್ತಿರುವ ಅವರು, ತಮ್ಮ ಮುಂದಿನ ಯೋಜನೆಗಳ ಬಗ್ಗೆ, ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ‘ಕನ್ನಡ​ಪ್ರಭ'ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. 

ಟಿ20 ಕ್ರಿಕೆಟ್‌'ನ ಸಾಮ್ರಾಟ, 10 ಸಹಸ್ರ ರನ್‌ ಸರದಾರ ಕ್ರಿಸ್‌ ಗೇಲ್‌, ಭಾರತದಲ್ಲಿ ಹೊಸ ವೃತ್ತಿಬದುಕು ಕಟ್ಟಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಹಲವು ಉದ್ಯಮಗಳಲ್ಲಿ ಹಣಹೂಡಿಕೆ ಮಾಡಿ ಕ್ರಿಕೆಟ್‌ ನಂತರದ ಬದುಕಿಗೆ ತಯಾರಾಗುತ್ತಿರುವ ಅವರು, ತಮ್ಮ ಮುಂದಿನ ಯೋಜನೆಗಳ ಬಗ್ಗೆ, ಟಿ20 ಕ್ರಿಕೆಟ್‌ನಲ್ಲಿ ಮುಂದುವರಿಯುವ ಬಗ್ಗೆ ‘ಕನ್ನಡ​ಪ್ರಭ'ದೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. 

1. ನೀವು ಬಾಲಿವುಡ್‌ಗೆ ಬರ್ತಾಯಿದ್ದೀರಿ ಎನ್ನುವ ಸುದ್ದಿ ಇದೆ?

ಹೌದು, ಈಗಾಗಲೇ ಬಾಲಿವುಡ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಮಾತುಕಥೆ ನಡೆದಿದೆ. ನನ್ನ ಸ್ನೇಹಿತ ಡ್ವೇನ್‌ ಬ್ರಾವೋ ಭಾರತದಲ್ಲಿ ತನ್ನ ನೃತ್ಯ, ನಟನೆಯಿಂದಲೂ ಮಿಂಚಿದ್ದಾರೆ. ನಾನೂ ಸಹ ಕ್ರಿಕೆಟ್‌ ಜತೆಗೆ ಬಣ್ಣದ ಲೋಕಕ್ಕೂ ಕಾಲಿಡಲು ನಿರ್ಧರಿಸಿದ್ದೇನೆ. ಇಷ್ಟುದಿನ ಕ್ರಿಕೆಟ್‌ ಮೈದಾನದಲ್ಲಿ ಮನರಂಜನೆ ನೀಡು​ತ್ತಿದ್ದೆ, ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಒಂದೆರೆಡು ತಿಂಗಳಲ್ಲಿ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ಬಿಚ್ಚಿಡುತ್ತೇನೆ. ಈಗಲೇ ಹೆಚ್ಚು ಹೇಳಲಾರೆ, ಎಲ್ಲರಿಗೂ ಅಚ್ಚರಿ ನೀಡಬೇಕು ಎನ್ನುವುದು ನನ್ನ ಉದ್ದೇಶ.

2. ಗೇಲ್‌ ಅಬ್ಬರ ಕಡಿಮೆಯಾದಂತಿದೆ, ನಿವೃತ್ತಿ ಬಗ್ಗೆ ಯೋಚಿಸಿದ್ದೀರೆ?

ಪ್ರತಿ ಬಾರಿ ನಾನು ಕ್ರೀಸ್‌ಗಿಳಿದಾಗಲೂ ಅಭಿ​ಮಾನಿಗಳು ನಾನು ಶತಕ ಬಾರಿಸಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಆದರೆ ಅದು ಸಾಧ್ಯ​ವಾಗದೆ ಇದ್ದಾಗ ಎಲ್ಲರಿಗೂ ನಿರಾಸೆಯಾಗಲಿದೆ. ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ನನ್ನಲ್ಲಿ ಇನ್ನೂ ಸಾಕಷ್ಟುಕ್ರಿಕೆಟ್‌ ಬಾಕಿ ಇದೆ. ಐಪಿಎಲ್‌ ಬಳಿಕ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ನಡೆಯಲಿದೆ. ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯೊಂದಿಗೆ 2 ವರ್ಷ ಒಪ್ಪಂದಕ್ಕೆ ಸಹಿ ಹಾಕಿದ್ದೇನೆ. ಆನಂತರ ಬಹುಶಃ ಬಾಂಗ್ಲಾ ಪ್ರೀಮಿಯರ್‌ ಲೀಗ್‌ನಲ್ಲೂ ಆಡಲಿದ್ದೇನೆ. ಐಪಿಎಲ್‌ನ ಮುಂದಿನ ಆವೃತ್ತಿಗೆ ಖಂಡಿತ ಬರುತ್ತೇನೆ ಎಂದು ಈ ಸಂದರ್ಭದಲ್ಲಿ ಭರವಸೆ ನೀಡುತ್ತೇನೆ.

3. ಈ ಬಾರಿ ನರೇನ್‌, ಗೇಲ್‌ರಂತೆ ಬ್ಯಾಟಿಂಗ್‌ ಮಾಡುತ್ತಿದ್ದರಲ್ಲಾ? 

ಇಲ್ಲ. ಸುನಿಲ್‌ ನರೇನ್‌, ಸುನಿಲ್‌ ನರೇನ್‌ರಂತೆ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ವಿಶ್ವ ಕ್ರಿಕೆಟ್‌ಗೆ ಒಬ್ಬನೇ ಕ್ರಿಸ್‌ ಗೇಲ್‌. ನನ್ನಂತೆ ಯಾರೂ ಸಹ ಬ್ಯಾಟ್‌ ಮಾಡಲು ಸಾಧ್ಯವಿಲ್ಲ. ಈ ಬಾರಿ ನನ್ನ ಆಟ ಕಳಪೆಯಾಗಿರಬಹುದು. ಆದರೂ ಕ್ರೀಡಾಂಗಣದಾಚೆಗೆ ಚೆಂಡನ್ನು ಹೊಡೆಯುವ ಸಾಮರ್ಥ್ಯ ನನ್ನಲ್ಲಿ ಇನ್ನೂ ಇದೆ.

4. ಹಲವು ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಕುರಿತು?

ನಾನೊಬ್ಬ ಮೋಜಿನ ವ್ಯಕ್ತಿ. ಹೀಗಾಗಿ ಮೋಜಿನಿಂದ ಕೂಡಿರುವ ಉದ್ಯಮಗಳಲ್ಲೇ ಹೆಚ್ಚು ಹಣ ಹೂಡಲು ಪ್ರಯತ್ನಿಸುತ್ತಿದ್ದೇನೆ. ಮಕ್ಕಳು ಒಂದೇ ಸೂರಿನಡಿ ಹಲವು ಕ್ರೀಡೆಗಳನ್ನು ಆಡಬಲ್ಲ ಅಂಗಳವೊಂದನ್ನು ನನ್ನ ತವರಲ್ಲಿ ಸ್ಥಾಪಿಸಲು ಚಿಂತನೆ ನಡೆಸಿದ್ದೇನೆ. ಉಳಿದಂತೆ ಕ್ರಿಕೆಟ್‌ ನಂತರದ ಜೀವನಕ್ಕೂ ಸಿದ್ಧತೆ ನಡೆಸಿದ್ದೇನೆ.

5. ಚಾಂಪಿಯನ್ಸ್‌ ಟ್ರೋಫಿಯಲ್ಲಿ ನಿಮ್ಮ ನೆಚ್ಚಿನ ತಂಡ?

ಎಲ್ಲಾ 8 ತಂಡಗಳು ಬಲಿಷ್ಠವಾಗಿವೆ. ಏಕದಿನ ಕ್ರಿಕೆಟ್‌ ಒಂದು ವಿಭಿನ್ನ ಹಾಗೂ ಆಸಕ್ತಿದಾಯಕ ಮಾದರಿ. ಟೂರ್ನಿಯಲ್ಲಿ ಕಡಿಮೆ ಪಂದ್ಯಗಳು ನಡೆಯಲಿರುವುದರಿಂದ ಯಾವ ತಂಡ ಲಯ ಕಾಯ್ದುಕೊಳ್ಳಲಿದೆಯೋ ಆ ತಂಡಕ್ಕೆ ಲಾಭ ಹೆಚ್ಚು. ಭಾರತ ಹಾಲಿ ಚಾಂಪಿಯನ್‌ ಆಗಿರುವುದರಿಂದ ನಿರೀಕ್ಷೆ ಹೆಚ್ಚಿದೆ. ವಿರಾಟ್‌, ಭಾರತವನ್ನು ಮತ್ತೊಮ್ಮೆ ಚಾಂಪಿಯನ್‌ಪಟ್ಟಕ್ಕೇರಿಸಿದರೆ ಅಚ್ಚರಿಯಿಲ್ಲ.

-ಸ್ಪಂದನ್ ಕಣಿಯಾರ್, ಕನ್ನಡ ಪ್ರಭ