ದೆಹಲಿ(ಡಿ.9): ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಹಿರಿಯ ಕ್ರಿಕೆಟಿಗ ಗೌತಮ್ ಗಂಭೀರ್ ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ವಿರುದ್ಧ ಹರಿಹಾಯ್ದಿದ್ದಾರೆ. ಈ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

2012ರ ಕಾಮನ್‌ವೆಲ್ತ್ ಬ್ಯಾಂಕ್ ಸೀರಿಸ್ ಸರಣಿಯಲ್ಲಿ ಹಿರಿಯ ಕ್ರಿಕೆಟಿಗರನ್ನ ರೋಟೇಶನ್ ಮೂಲಕ ವಿಶ್ರಾಂತಿ ನೀಡಲಾಗಿತ್ತು. ಇಷ್ಟೇ ಅಲ್ಲ 2015ರ ವಿಶ್ವಕಪ್ ಟೂರ್ನಿಗೆ ಫಿಟ್ನೆಸ್ ಇರೋ ಯುವ ಕ್ರಿಕೆಟಿಗರ ಅವಶ್ಯಕತೆ ಇದೆ ಎಂದು ಧೋನಿ ಹೇಳಿದ್ದರು. ಇದೀಗ ಧೋನಿ ನಿರ್ಧಾರವನ್ನ ಗಂಭೀರ್ ಟೀಕಿಸಿದ್ದಾರೆ.

ಸಚಿನ್ ತೆಂಡೂಲ್ಕರ್, ವಿರೇಂದ್ರ ಸೆಹ್ವಾಗ್ ಹಾಗೂ ಗೌತಮ್ ಗಂಭೀರ್. ಈ ಮೂವರು ಹಿರಿಯ ಕ್ರಿಕೆಟಿಗರನ್ನ ಜೊತೆಯಾಗಿ ಆಡಿಸಲು ಸಾಧ್ಯವಿಲ್ಲ ಎಂಬ ಧೋನಿ ಹೇಳಿಕೆ ನಿಜಕ್ಕೂ ಅಚ್ಚರಿ ತಂದಿತ್ತು. ನಮ್ಮ ಪ್ರದರ್ಶನ ಉತ್ತಮವಾಗಿತ್ತು. ಆದರೆ ಫೀಲ್ಡಿಂಗ್‌ನಲ್ಲಿ ಚುರುಕುತನ ಇಲ್ಲ ಅನ್ನೋ ಕಾರಣ ನೀಡಿ ವಿಶ್ರಾಂತಿ ನೀಡಿದ್ದರು. ಇದು ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಗಂಭೀರ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಆರಂಭದಲ್ಲಿ ಧೋನಿ ಮೂವರು ಹಿರಿಯ ಕ್ರಿಕೆಟಿಗರನ್ನ ಜೊತೆಯಾಗಿ ಆಡಿಸಿಲ್ಲ. ಆದರೆ ಹೊಬಾರ್ಡ್ ಪಂದ್ಯದಲ್ಲಿ ಎಲ್ಲಾ ಹಿರಿಯ ಕ್ರಿಕೆಟಿಗರು ಜೊತೆಯಾಗಿ ಆಡಿದ್ದೇವು. ಆ ಪಂದ್ಯದಲ್ಲಿ ನಾವು ಗೆಲುವು ಸಾಧಿಸಿದ್ದೇವು. ಧೋನಿಗೆ ಗೆಲುವು ಬೇಕು ಎಂದಾಗ ಕೊನೆಗೆ ತಮ್ಮ ನಿರ್ಧಾರ ಬದಲಿಸಿದರು ಎಂದು ಗಂಭೀರ್ ಆರೋಪಿಸಿದ್ದಾರೆ.