ನಡಾಲ್ ಓಟಕ್ಕೆ ಥೀಮ್ ಬ್ರೇಕ್..?
ಕ್ಲೇ-ಕೋರ್ಟ್ ಕಿಂಗ್ ನಡಾಲ್‌ಗೆ ಫೈನಲ್‌ನಲ್ಲಿ ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಕಾರಣ, ಫೈನಲ್ ಪ್ರವೇಶಿಸಿರುವ ಆಸ್ಟ್ರಿಯಾದ ಡೊಮಿನಿಕ್ ಥೀಮ್, ಮಣ್ಣಿನಂಕಣದಲ್ಲಿ 2ನೇ ಶ್ರೇಷ್ಠ ಆಟಗಾರ ಎಂದೇ ಕರೆಸಿಕೊಳ್ಳುತ್ತಿದ್ದಾರೆ.
ಪ್ಯಾರಿಸ್[ಜೂ.10]: ಬಹುನಿರೀಕ್ಷಿತ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ಭಾನುವಾರ ಇಲ್ಲಿ ನಡೆಯಲಿದೆ. ದಾಖಲೆಯ 10 ಫ್ರೆಂಚ್ ಓಪನ್ ಪ್ರಶಸ್ತಿಗಳ ಒಡೆಯ ರಾಫೆಲ್ ನಡಾಲ್, 11ನೇ ಕಿರೀಟದ ಮೇಲೆ ಕಣ್ಣಿಟ್ಟಿದ್ದಾರೆ.
ಆದರೆ ಕ್ಲೇ-ಕೋರ್ಟ್ ಕಿಂಗ್ ನಡಾಲ್‌ಗೆ ಫೈನಲ್‌ನಲ್ಲಿ ಭಾರೀ ಪೈಪೋಟಿ ಎದುರಾಗುವ ನಿರೀಕ್ಷೆ ಇದೆ. ಕಾರಣ, ಫೈನಲ್ ಪ್ರವೇಶಿಸಿರುವ ಆಸ್ಟ್ರಿಯಾದ ಡೊಮಿನಿಕ್ ಥೀಮ್, ಮಣ್ಣಿನಂಕಣದಲ್ಲಿ 2ನೇ ಶ್ರೇಷ್ಠ ಆಟಗಾರ ಎಂದೇ ಕರೆಸಿಕೊಳ್ಳುತ್ತಿದ್ದಾರೆ.
ನಡಾಲ್ ವಿರುದ್ಧ ಇತ್ತೀಚಿನ ದಿನಗಳಲ್ಲಿ ಮಣ್ಣಿನಂಕಣದಲ್ಲಿ ಯಶಸ್ಸು ಸಾಧಿಸಿರುವ ಏಕೈಕ ಆಟಗಾರ ಥೀಮ್. ಮಣ್ಣಿನಂಕಣದಲ್ಲಿ ಸತತ 50 ಸೆಟ್ ಗೆದ್ದು ವಿಶ್ವ ದಾಖಲೆ ಬರೆದಿದ್ದ ವಿಶ್ವ ನಂ.1 ನಡಾಲ್, ಮ್ಯಾಡ್ರಿಡ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಥೀಮ್‌ಗೆ ಶರಣಾಗಿದ್ದರು. ಕಳೆದ ವರ್ಷ ರೋಮ್ ಮಾಸ್ಟರ್ಸ್ ಟೂರ್ನಿಯಲ್ಲೂ ಥೀಮ್ ಜಯಭೇರಿ ಬಾರಿಸಿದ್ದರು. ಹೀಗಾಗಿ, ನಡಾಲ್ ಪ್ರಶಸ್ತಿ ಉಳಿಸಿಕೊಳ್ಳಲು ಹೆಚ್ಚುವರಿ ಶ್ರಮ ವಹಿಸಬೇಕಾಗಿದೆ. ಈ ಇಬ್ಬರು ಕೇವಲ ಮಣ್ಣಿನ ಅಂಕಣದಲ್ಲೇ ಮುಖಾಮುಖಿಯಾಗಿದ್ದು, ನಡಾಲ್ 6 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಫ್ರೆಂಚ್ ಓಪನ್'ನಲ್ಲಿ ಇಬ್ಬರು 2 ಬಾರಿ ಮುಖಾಮುಖಿಯಾಗಿದ್ದು ನಡಾಲ್ 2ರಲ್ಲೂ ಗೆಲುವು ಪಡೆದಿದ್ದಾರೆ. ನಡಾಲ್ ಒಟ್ಟು 16 ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.