ಫ್ರೆಂಚ್ ಓಪನ್: 3ನೇ ಸುತ್ತಿಗೆ ಜೋಕೋವಿಚ್, ಇಗಾ ಸ್ವಿಯಾಟೆಕ್
ಫ್ರೆಂಚ್ ಓಪನ್‌ನಲ್ಲಿ ಮುಂದುವರೆದ ಜೋಕೋ ಗೆಲುವಿನ ಓಟ
23ನೇ ಟೆನಿಸ್ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ಜೋಕೋ
ವಿಶ್ವ ನಂ.1 ಆಲ್ಕರಜ್‌ಗೂ ಮುನ್ನಡೆ
ಪ್ಯಾರಿಸ್(ಜೂ.02): ದಾಖಲೆಯ 23ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನೋವಾಕ್ ಜೋಕೋವಿಚ್ ಹಾಗೂ ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂನಲ್ಲಿ 3ನೇ ಸುತ್ತು ಪ್ರವೇಶಿಸಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ವಿಶ್ವ ನಂ.1 ಆಟಗಾರ ಕಾರ್ಲೋಸ್ ಆಲ್ಕರಜ್ ಸಹ ಪುರುಷರ ಸಿಂಗಲ್ಸ್‌ನ 3ನೇ ಸುತ್ತಿಗೇರಿದ್ದಾರೆ.
2ನೇ ಸುತ್ತಿನ ಪಂದ್ಯದಲ್ಲಿ 2 ಬಾರಿ ಚಾಂಪಿಯನ್ ಜೋಕೋವಿಚ್, ಹಂಗೇರಿಯ ಮಾರ್ಟನ್ ಫುಕ್ಸೋವಿಕ್ಸ್ ವಿರುದ್ಧ 7-6(7-2), 6-0, 6-3 ನೇರ ಸೆಟ್ಗಳಿಂದ ಜಯಿಸಿದರು. ಮುಂದಿನ ಸುತ್ತಿನಲ್ಲಿ ಜೋಕೋಗೆ ಸ್ಪೇನ್‌ನ ಅಲಿಯಾಂಡ್ರೋ ಫೆäಕಿನಾ ಸವಾಲು ಎದುರಾಗಲಿದೆ. ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ವಿಶ್ವ ನಂ.1, ಪೋಲೆಂಡ್‌ನ ಸ್ವಿಯಾಟೆಕ್ ಅಮೆರಿಕದ ಕ್ಲಾರಿ ಲಿಯು ವಿರುದ್ಧ 6-4, 6-0ಯಲ್ಲಿ ಜಯಿಸಿದರು.
ಇದೇ ವೇಳೆ ಹಾಲಿ ಯುಎಸ್ ಓಪನ್ ಚಾಂಪಿಯನ್, ಸ್ಪೇನ್‌ನ ಆಲ್ಕರಜ್, ಜಪಾನ್ನ ಟೊರಿ ಡೇನಿಯಲ್ರನ್ನು 6-1, 3-6, 6-1, 6-2 ಸೆಟ್ಗಳಿಂದ ಸೋಲಿಸಿದರು. ಆದರೆ 3 ಗ್ರ್ಯಾನ್‌ಸ್ಲಾಂ ವಿಜೇತ ಸ್ವಿಜರ್ಲೆಂಡ್ನ ಸ್ಟಾನ್ ವಾಂವ್ರಿಕಾ ಆಸ್ಪ್ರೇಲಿಯಾದ ಕೊಕ್ಕಿನಾಕಿಸ್ ವಿರುದ್ಧ ಸೋತು ಹೊರಬಿದ್ದರು.
ಸಬಲೆಂಕಾ, ರಬೈಕೆನಾ ಮುನ್ನಡೆ: ವಿಶ್ವ ನಂ.2, ಹಾಲಿ ಆಸ್ಪ್ರೇಲಿಯನ್ ಓಪನ್ ಚಾಂಪಿಯನ್ ಬೆಲಾರಸ್‌ನ ಅರೈನಾ ಸಬಲೆಂಕಾ ತಮ್ಮದೇ ದೇಶದ ಶಿಮನೋವಿಕ್ ವಿರುದ್ಧ 7-5, 6-2ರಲ್ಲಿ ಗೆದ್ದು 3ನೇ ಸುತ್ತಿಗೇರಿದರೆ, ಹಾಲಿ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕೆನಾ ಚೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ ಎದುರು 6-3, 6-3 ಸೆಟ್ಗಳಲ್ಲಿ ಜಯಗಳಿಸಿದರು. ಆದರೆ 5ನೇ ಶ್ರೇಯಾಂಕಿತೆ, ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 2ನೇ ಸುತ್ತಿನಲ್ಲಿ ಸೋತು ಹೊರಬಿದ್ದರು.
ಥಾಯ್ಲೆಂಡ್ ಓಪನ್: ಕ್ವಾರ್ಟರ್ಗೆ ಲಕ್ಷ್ಯ ಸೇನ್, ಕಿರಣ್
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ನಲ್ಲಿ ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್ ಹಾಗೂ ಕಿರಣ್ ಜಾಜ್‌ರ್ ಕ್ವಾರ್ಟರ್ ಫೈನಲ್ಗೇರಿದ್ದಾರೆ. ಆದರೆ ಉಳಿದೆಲ್ಲಾ ವಿಭಾಗಗಳಲ್ಲಿ ಭಾರತೀಯರ ಸವಾಲು ಅಂತ್ಯಗೊಂಡಿದೆ.
ಗುರುವಾರ ಪುರುಷರ ಸಿಂಗಲ್ಸ್ 2ನೇ ಸುತ್ತಿನಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಸೇನ್, ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲೀ ಶಿ ಫೆಂಗ್ ವಿರುದ್ಧ 21-17, 21-15 ಗೇಮ್ಗಳಲ್ಲಿ ಗೆದ್ದರೆ, ವಿಶ್ವ ನಂ.59 ಕಿರಣ್ ಚೀನಾದ ವೆಂಗ್ ಹೊಂಗ್ ಯಾಂಗ್ರನ್ನು 21-11, 21-19 ಅಂತರದಲ್ಲಿ ಸೋಲಿಸಿ, ಬಿಡಬ್ಲ್ಯುಎಫ್ ವಿಶ್ವ ಟೂರ್ 500 ವಿಭಾಗದಲ್ಲಿ ಕಿರಣ್ ಮೊದಲ ಬಾರಿಗೆ ಅಂತಿಮ-8ರ ಘಟ್ಟಕ್ಕೇರಿದರು.
ಮಹಿಳಾ ಸಿಂಗಲ್ಸ್ನಲ್ಲಿ ಮಾಜಿ ಚಾಂಪಿಯನ್ ಸೈನಾ ನೆಹ್ವಾಲ್, ವಿಶ್ವ ನಂ.5 ಚೀನಾದ ಬಿಂಗ್ ಜಿಯಾಹೊ ವಿರುದ್ಧ, ಅಶ್ಮಿತಾ ಛಲಿಹಾ ಮಾಜಿ ವಿಶ್ವ ನಂ.1 ಸ್ಪೇನ್‌ನ ಕ್ಯಾರೊಲಿನಾ ಮರೀನ್ ವಿರುದ್ಧ ಪರಾಭವಗೊಂಡರು. ಪುರುಷರ ಡಬಲ್ಸ್ನಲ್ಲಿ ಪದಕ ಭರವಸೆ ಮೂಡಿಸಿದ್ದ ಸಾತ್ವಿಕ್-ಚಿರಾಗ್ ಶೆಟ್ಟಿಕೂಡಾ ಸೋಲಿನ ಆಘಾತಕ್ಕೊಳಗಾದರು.