ಫ್ರೆಂಚ್ ಓಪನ್: 2ನೇ ಸುತ್ತಿಗೆ ಒಸಾಕ
ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ, ಸ್ಲೋವಾಕಿಯಾದ ಆ್ಯನಾ ಕ್ಯಾರೋಲಿನಾ ವಿರುದ್ಧ ಒಸಾಕ 0-6, 7-6 (7/4), 6-1 ಸೆಟ್‌ಗಳಲ್ಲಿ ಜಯಗಳಿಸಿದರು.
ಪ್ಯಾರಿಸ್[ಮೇ.29]: ಹಾಲಿ ಆಸ್ಪ್ರೇಲಿಯನ್ ಓಪನ್, ಯುಎಸ್ ಓಪನ್ ಚಾಂಪಿಯನ್, ವಿಶ್ವ ನಂ.1 ಆಟಗಾರ್ತಿ ಜಪಾನ್‌ನ ನವೊಮಿ ಒಸಾಕ ಇಲ್ಲಿ ನಡೆಯುತ್ತಿರುವ ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲಿ ಸೋಲಿನ ದವಡೆಯಿಂದ ಪಾರಾಗಿದ್ದಾರೆ.
ಮಂಗಳವಾರ ನಡೆದ ಮಹಿಳಾ ಸಿಂಗಲ್ಸ್ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ್ತಿ, ಸ್ಲೋವಾಕಿಯಾದ ಆ್ಯನಾ ಕ್ಯಾರೋಲಿನಾ ವಿರುದ್ಧ ಒಸಾಕ 0-6, 7-6 (7/4), 6-1 ಸೆಟ್‌ಗಳಲ್ಲಿ ಜಯಗಳಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 92ನೇ ಸ್ಥಾನದಲ್ಲಿರುವ ಕ್ಯಾರೋಲಿನಾ ಮೊದಲ ಸೆಟ್‌ನಲ್ಲಿ ಒಂದೂ ಗೇಮ್ ಸೋಲದೆ ಗೆದ್ದು ಮುನ್ನಡೆ ಸಾಧಿಸುವ ಮೂಲಕ, ಭಾರಿ ಕುತೂಹಲ ಮೂಡಿಸಿದ್ದರು.
2ನೇ ಸೆಟ್‌ನಲ್ಲಿ 2 ಬಾರಿ ಮ್ಯಾಚ್ ಪಾಯಿಂಟ್ ಅವಕಾಶ ಪಡೆದಿದ್ದ ಕ್ಯಾರೋಲಿನಾರನ್ನು ತಡೆದು ಸೆಟ್ ಉಳಿಸಿಕೊಂಡ ಒಸಾಕ, 3ನೇ ಹಾಗೂ ಅಂತಿಮ ಸೆಟ್‌ನಲ್ಲಿ ಅಧಿಕಾರಯುತ ಗೆಲುವು ಸಾಧಿಸಿ, 2ನೇ ಸುತ್ತಿಗೆ ಪ್ರವೇಶಿಸಿದರು.
2017ರ ಚಾಂಪಿಯನ್ ಒಸ್ಟಪೆನ್ಕೊ ಔಟ್
ಫ್ರೆಂಚ್ ಓಪನ್ ಟೆನಿಸ್ ಗ್ರ್ಯಾಂಡ್‌ಸ್ಲಾಂನಲ್ಲಿ ಮತ್ತೊಂದು ಆಘಾತಕಾರಿ ಫಲಿತಾಂಶ ಹೊರಬಿದ್ದಿದೆ. 2017ರ ಮಹಿಳಾ ಸಿಂಗಲ್ಸ್ ಚಾಂಪಿಯನ್ ಲಾತ್ವಿಯಾದ ಎಲೆನಾ ಓಸ್ಟಪೆನ್ಕೊ, ಮಂಗಳವಾರ ಮೊದಲ ಸುತ್ತಿನಲ್ಲಿ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ವಿರುದ್ಧ 4-6, 6-7 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.
ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದ ಅಜರೆಂಕಾ, 2019ರ ಆಸ್ಪ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಇದೀಗ ಮೊದಲ ಸುತ್ತಿನಲ್ಲೇ ಮಾಜಿ ಚಾಂಪಿಯನ್ ವಿರುದ್ಧ ಗೆಲುವು ಸಾಧಿಸುವ ಮೂಲಕ, ಪ್ರಶಸ್ತಿ ರೇಸ್‌ಗೆ ಪ್ರವೇಶಿಸಿದ್ದಾರೆ.