ಪಂದ್ಯಗಳು ಡ್ರಾಗೊಂಡ ಹೊರತಾಗಿಯೂ ಯುರೋಪಿಯನ್‌ ದೈತ್ಯ ತಂಡಗಳು ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದವು. ಸೋಮವಾರ ರಾತ್ರಿ ನಡೆದ ಎರಡೂ ಪಂದ್ಯಗಳು ಭಾರೀ ರೋಚಕತೆಯಿಂದ ಕೂಡಿತ್ತು. ತಂಡಗಳ ಮೊದಲೆರಡು ಪಂದ್ಯಗಳ ಫಲಿತಾಂಶ ಲೆಕ್ಕಕ್ಕೇ ಇಲ್ಲದಂತಾಗಿತ್ತು.

ಸರಾನ್ಸ್‌[ಜೂ.27]: ಅದೃಷ್ಟದ ಬೆನ್ನೇರಿ ವಿಶ್ವಕಪ್‌ನಲ್ಲಿ ಸವಾರಿ ಮಾಡುತ್ತಿರುವ ಸ್ಪೇನ್‌ ಹಾಗೂ ಪೋರ್ಚುಗಲ್‌ ‘ಬಿ’ ಗುಂಪಿನಿಂದ ನಾಕೌಟ್‌ ಹಂತಕ್ಕೇರಿವೆ. ಸೋಮವಾರ ನಡೆದ ಗುಂಪು ಹಂತದ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಮೊರಾಕ್ಕೊ ವಿರುದ್ಧ ಸ್ಪೇನ್‌ 2-2ರಲ್ಲಿ ಡ್ರಾ ಸಾಧಿಸಿದರೆ, ಇರಾನ್‌ ವಿರುದ್ಧದ ಪಂದ್ಯವನ್ನು ಪೋರ್ಚುಗಲ್‌ 1-1ರಲ್ಲಿ ಡ್ರಾ ಮಾಡಿಕೊಂಡಿತು.

ಪಂದ್ಯಗಳು ಡ್ರಾಗೊಂಡ ಹೊರತಾಗಿಯೂ ಯುರೋಪಿಯನ್‌ ದೈತ್ಯ ತಂಡಗಳು ಅಂತಿಮ 16ರ ಸುತ್ತಿಗೆ ಪ್ರವೇಶ ಪಡೆದವು. ಸೋಮವಾರ ರಾತ್ರಿ ನಡೆದ ಎರಡೂ ಪಂದ್ಯಗಳು ಭಾರೀ ರೋಚಕತೆಯಿಂದ ಕೂಡಿತ್ತು. ತಂಡಗಳ ಮೊದಲೆರಡು ಪಂದ್ಯಗಳ ಫಲಿತಾಂಶ ಲೆಕ್ಕಕ್ಕೇ ಇಲ್ಲದಂತಾಗಿತ್ತು.

ಸ್ಪೇನ್‌ ವಿರುದ್ಧ 14ನೇ ನಿಮಿಷದಲ್ಲೇ ಗೋಲು ಬಾರಿಸಿ ಖಾಲಿದ್‌ ಮೊರಾಕ್ಕೊಗೆ ಮೊದಲು ಗೋಲು ತಂದುಕೊಟ್ಟರು. ಆದರೆ ಸಮಬಲ ಸಾಧಿಸಲು ಸ್ಪೇನ್‌ ಹೆಚ್ಚಿಗೆ ಸಮಯ ತೆಗೆದುಕೊಳ್ಳಲಿಲ್ಲ. 19ನೇ ನಿಮಿಷದಲ್ಲಿ ಇಸ್ಕೋ, ಸ್ಪೇನ್‌ ಪರ ಗೋಲಿನ ಖಾತೆ ತೆರೆದರು. 81ನೇ ನಿಮಿಷದಲ್ಲಿ ಯೂಸುಫ್‌ ಮೊರಾಕ್ಕೊಗೆ 2ನೇ ಗೋಲು ತಂದುಕೊಟ್ಟು ಗೆಲುವಿನ ಆಸೆ ಚಿಗುರಿಸಿದರು. ಆದರೆ 90+1ನೇ ನಿಮಿಷದಲ್ಲಿ ಆಸ್ಪಾಸ್‌ ಬಾರಿಸಿದ ಗೋಲು, ಪಂದ್ಯದ ಗತಿ ಬದಲಿಸಿತು. ಮೊರಾಕ್ಕೊ ಗೆಲುವನ್ನೇ ಕಾಣದೆ, ಟೂರ್ನಿಗೆ ವಿದಾಯ ಹೇಳಿತು.

ಮತ್ತೊಂದು ಪಂದ್ಯದಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಪೆನಾಲ್ಟಿಕಿಕ್‌ ಅವಕಾಶವನ್ನು ವ್ಯರ್ಥಗೊಳಿಸಿದರ ಪರಿಣಾಮವಾಗಿ ಪೋರ್ಚುಗಲ್‌, ಇರಾನ್‌ ವಿರುದ್ಧ 1-1 ಗೋಲುಗಳಲ್ಲಿ ಡ್ರಾಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಪಂದ್ಯದ 45ನೇ ನಿಮಿಷದಲ್ಲಿ ರಿಕಾರ್ಡೋ ಕ್ವರೆಸ್ಮಾ ಗೋಲು ಬಾರಿಸಿ 1-0 ಮುನ್ನಡೆ ಒದಗಿಸಿದರು. 90+3ನೇ ನಿಮಿಷದಲ್ಲಿ ಕರೀಂ ಪೆನಾಲ್ಟಿಕಿಕ್‌ ಮೂಲಕ ಗೋಲು ಬಾರಿಸಿ, ಇರಾನ್‌ ಸಮಬಲ ಸಾಧಿಸಲು ನೆರವಾದರು. ಇರಾನ್‌ ಗೋಲು ಗಳಿಸಿ ಭರ್ಜರಿ ಸಂಭ್ರಮ ಆಚರಿಸಿತು. ಕಾರಣ, ಒಂದೊಮ್ಮೆ ಮೊರಾಕ್ಕೊ ವಿರುದ್ಧ ಸ್ಪೇನ್‌ ಸೋತಿದ್ದರೆ, ಇರಾನ್‌ ನಾಕೌಟ್‌ಗೇರುತ್ತಿತ್ತು. ಆದರೆ ಸ್ಪೇನ್‌ ಡ್ರಾ ಸಾಧಿಸಿದ ಕಾರಣ, ಇರಾನ್‌ ಹೊರಬೀಳಬೇಕಾಯಿತು.