ಫಿಫಾ ವಿಶ್ವಕಪ್ 2018ರಲ್ಲಿ ಯಾವೆಲ್ಲಾ ದಾಖಲೆಗಳು ನಿರ್ಮಾಣವಾಗಲಿದೆ?
ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಈ ಬಾರಿ ಯಾವ ದಾಖಲೆಗಳು ನಿರ್ಮಾಣವಾಗಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಮೆಸ್ಸಿಗೆ ಸಿಗಲಿರುವ ಗೌರವ ಯಾವುದು? ಗರಿಷ್ಠ ವಾರ್ನಿಂಗ್ ಕಾರ್ಡ್ ಯಾರ ಹೆಸರಲ್ಲಿದೆ. ಇಂತಹ ರೋಚಕ ಮಾಹಿತಿಗಳ ಡೀಟೇಲ್ಸ್ ಇಲ್ಲಿದೆ.
ರಶ್ಯಾ(ಜೂನ್.5): ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ. ಈ ಬಾರಿ ಯಾವ ತಂಡ ಚಾಂಪಿಯನ್ ಪಟ್ಟ ಅಲಂಕರಿಸಲಿದೆ ಅನ್ನೋ ಕುತೂಹಲ ಈಗ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇದರ ಜೊತೆಗೆ ಈ ಬಾರಿ ನಿರ್ಮಾಣವಾಗಲಿರುವ ದಾಖಲೆಗಳ ಕುರಿತು ಲೆಕ್ಕಾಚಾರಗಳು ಶುರುವಾಗಿದೆ.
ವಿಶ್ವಕಪ್ ಟೂರ್ನಿಯ ಹಿರಿಯ ಫುಟ್ಬಾಲ್ ಪಟು:
ಫಿಫಾ ವಿಶ್ವಕಪ್ ಆಡಿದ ಹಿರಿಯ ಆಟಗಾರ ಅನ್ನೋ ಹೆಗ್ಗಳಿಕೆಗೆ ಕೊಲಂಬಿಯಾದ ಫರೀದ್ ಮೊಂಡ್ರಾಗಾನ್ ಪಾತ್ರರಾಗಿದ್ದಾರೆ. 2014ರ ಫಿಫಾ ವಿಶ್ವಕಪ್‌ನಲ್ಲಿ ಪಾಲ್ಗೊಂಡ 43 ವರ್ಷದ ಫರೀದ್, ವಿಶ್ವಕಪ್ ಆಡಿದ ಹಿರಿಯ ಫುಟ್ಬಾಲ್ ಎಂಬ ದಾಖಲೆ ಬರೆದಿದ್ದರು. ಆದರೆ ಈ ಬಾರಿ ಈಜಿಪ್ಟ್ ತಂಡದ ಎಸ್ಸಾನ್-ಯೆಲ್-ಹ್ಯಾಡರಿ ಈ ದಾಖಲೆ ಮುರಿಯಲಿದ್ದಾರೆ. 45 ವರ್ಷದ ಎಸ್ಸಾನ್ ಈ ಬಾರಿಯ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಈಜಿಪ್ಟ್ ತಂಡವನ್ನ ಪ್ರತಿನಿಧಿಸಲಿದ್ದಾರೆ.
ಗೋಲ್ಡನ್ ಬೂಟ್ :
ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಇದುವರೆಗೂ ಯಾವ ಫುಟ್ಬಾಲ್ ಪಟು ಕೂಡ 2 ಬಾರಿ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದಿಲ್ಲ. ಈ ಬಾರಿ ಅರ್ಜೆಂಟೀನಾದ ಸ್ಟಾರ್ ಪ್ಲೇಯರ್ ಲಿಯೋನಲ್ ಮೆಸ್ಸಿಗೆ ಈ ಅವಕಾಶವಿದೆ. 2014ರ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಅದ್ಬುತ ಪ್ರದರ್ಶನ ನೀಡಿ ತಂಡವನ್ನ ಫೈನಲ್ ವರೆಗೂ ಕೊಂಡೊಯ್ದಿದ್ದರು. ಈ ಮೂಲಕ ಗೋಲ್ಡನ್ ಬೂಟ್ ಪ್ರಶಸ್ತಿ ಪಡೆದಿದ್ದರು. ಈ ಬಾರಿಯೂ ಅದೇ ಪ್ರದರ್ಶನ ಮುಂದುವರಿಸಿದರೆ ಮೆಸ್ಸಿ ದಾಖಲೆ ಬರೆಯೋದರಲ್ಲಿ ಅನುಮಾನವಿಲ್ಲ.
ಗರಿಷ್ಠ ಗೋಲು:
ಜರ್ಮನಿ ತಂಡದ ಮಾಜಿ ಫುಟ್ಬಾಲ್ ಪಟು ಮಿರೋಸ್ಲಾವ್ ಕ್ಲೋಸೆ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಓಟ್ಟು 16 ಗೋಲು ಸಿಡಿಸಿ, ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ಗೋಲು ಸಿಡಿಸಿದ್ದಾರೆ. 2014ರ ಫುಟ್ಬಾಲ್ ಟೂರ್ನಿಯಲ್ಲಿ ಬ್ರೆಜಿಲ್ ವಿರುದ್ಧ ಗೋಲು ಸಿಡಿಸಿ, ಬ್ರೆಜಿಲ್‌ನ ರೋನಾಲ್ಡೋ ದಾಖಲೆ ಮುರಿದಿದ್ದರು. ಇದೀಗ ಜರ್ಮನ್ ತಂಡದ ಫಾರ್ವಡ್ ಪ್ಲೇಯರ್ ಥಾಮಸ್ ಮುಲ್ಲರ್‌ಗೆ ಗರಿಷ್ಠ ಗೋಲು ಸಿಡಿಸುವ ಅವಕಾಶವಿದೆ. ವಿಶ್ವಕಪ್ ಟೂರ್ನಿಯಲ್ಲಿ 10 ಗೋಲು ಸಿಡಿಸಿರುವ ಮುಲ್ಲರ್ ಈಗ 3ನೇ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ.
ಗರಿಷ್ಠ ಕಾರ್ಡ್ ಪಡೆದ ಪಟು:
ಫ್ರೆಂಚ್ ಮಾಜಿ ಪ್ಲೇಯರ್ ಜಿನೇದಿನ ಜಿದಾನೆ, ಬ್ರೆಜಿಲ್ ಮಾಜಿ ಆಟಗಾರ ಕಾಫು ಹಾಗೂ ಮೆಕ್ಸಿಕೋ ತಂಡದ ರಾಫೆಲ್ ಮಾರ್ಕ್ವೆಜ್ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ಕಾರ್ಡ್ ಪಡೆದ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಈ ಮೂವರು ಆಟಗಾರರು ತಲಾ 6 ವಾರ್ನಿಂಗ್ ಕಾರ್ಡ್ ಪಡೆದಿದ್ದಾರೆ. ಆದರೆ ಜಿದಾನೆ ಹಾಗೂ ಕಾಫು ನಿವೃತ್ತಿಯಾಗಿದ್ದರೆ. ರಾಫೆಲ್ ಮಾರ್ಕ್ವೆಜ್ ಇದೀಗ 5ನೇ ವಿಶ್ವಕಪ್ ಆಡಲು ಸಜ್ಜಾಗಿದ್ದಾರೆ. ಹೀಗಾಗಿ ಎಚ್ಚರಿಕಕೆ ತಪ್ಪಿದರೆ ಗರಿಷ್ಠ ಕಾರ್ಡ್ ಪಡೆದ ಕುಖ್ಯಾತಿಗೆ ಪಾತ್ರರಾಗಲಿದ್ದಾರೆ.