ಮಾಸ್ಕೋ(ಜೂ.28): ಮಿನಾ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಸೆನಗಲ್ ತಂಡವನ್ನು ಮಣಿಸಿದ ಕೊಲಂಬಿಯಾ 16ರ ಘಟ್ಟ ಪ್ರವೇಶಿಸಿದೆ. ನಾಕೌಟ್ ಪ್ರವೇಶದ ಕನಸು ಕಾಣುತ್ತಿದ್ದ ಸೆನೆಗಲ್ ಪ್ರವೇಶ ಭಗ್ನವಾಗಿದೆ. ಇನ್ನು ಪೊಲೆಂಡ್ ವಿರುದ್ಧ ಮುಗ್ಗರಿಸಿದರೂ ಜಪಾನ್ ನಾಕೌಟ್ ಹಂತ  ಪ್ರವೇಶಿಸಿದೆ.

‘ಎಚ್’ ಗುಂಪಿನ ಪಂದ್ಯದಲ್ಲಿ ಪೋಲೆಂಡ್ ವಿರುದ್ಧ ಜಪಾನ್ 1-0 ಗೋಲುಗಳ ಅಂತರದಲ್ಲಿ ಮುಗ್ಗರಿಸಿತಾದರೂ ಸೆನೆಗಲ್’ಗಿಂತ ಕಡಿಮೆ ಹಳದಿ ಕಾರ್ಡ್ ಪಡೆದಿದ್ದರಿಂದ ಜಪಾನ್ ನಾಕೌಟ್ ಹಂತಕ್ಕೆ ಲಗ್ಗೆಯಿಟ್ಟಿತು. ಪೋಲೆಂಡ್ ಪರ 59ನೇ ನಿಮಿಷದಲ್ಲಿ ರಫೇಲ್ ಕರ್ಜ್ವಾ ನೀಡಿದ ಪ್ರೀ ಕಿಕ್ ಪಾಸ್ ಯಶಸ್ವಿಯಾಗಿ ಬಳಸಿಕೊಂಡ ಜಾನ್ ಬೆಡ್’ನಾರ್ಕ್ ಗೋಲು ಬಾರಿಸಿ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಪೋಲೆಂಡ್ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದೆ.

ಇನ್ನು ‘ಎಚ್’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಸೆನೆಗಲ್ ತಂಡವನ್ನು ಮಣಿಸಿ ಕೊಲಂಬಿಯಾ ನಾಕೌಟ್ ಹಂತ ಪ್ರವೇಶಿಸಿದೆ. ಯರ್ರಿ ಮೈನಾ ಬಾರಿಸಿದ ಏಕೈಕ ಗೋಲು ಕೊಲಂಬಿಯಾ ತಂಡವನ್ನು ಜಯದ ಖುಷಿಯಲ್ಲಿ ಮುಳುಗುವಂತೆ ಮಾಡಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಬಾರಿಸಲು ಸಾಧ್ಯವಾಗಿರಲಿಲ್ಲ. ಆದರೆ ದ್ವಿತಿಯಾರ್ಧದಲ್ಲಿ ಪಂದ್ಯದ 74ನೇ ನಿಮಿಷದಲ್ಲಿ ಮೈನಾ ಗೋಲು ಬಾರಿಸಿ ತಂಡದ ಪಾಲಿಗೆ ಗೆಲುವಿನ ರೂವಾರಿಯಾದರು. ಇದರೊಂದಿಗೆ ಸೆನೆಗಲ್  ತಂಡದ ನಾಕೌಟ್  ಪ್ರವೇಶದ ಕನಸು ಭಗ್ನವಾಗಿದೆ.