ಫಿಫಾ ವಿಶ್ವಕಪ್: ವಿಶ್ವಕಪ್’ನಲ್ಲಿಂದು ಡಬಲ್ ಧಮಾಕ
018ರ ವಿಶ್ವಕಪ್ ಗೆಲ್ಲುವ ಅಗ್ರ 5 ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜರ್ಮನಿ ಹಾಗೂ ಬ್ರೆಜಿಲ್ ಇಂದು ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಎರಡೂ ತಂಡಗಳಿಗೆ ಮೊದಲ ಪಂದ್ಯದಲ್ಲೇ ಕಠಿಣ ಸವಾಲು ಎದುರಾಗಿವೆ.
ಮಾಸ್ಕೋ[ಜೂ.17]: 2018ರ ವಿಶ್ವಕಪ್ ಗೆಲ್ಲುವ ಅಗ್ರ 5 ನೆಚ್ಚಿನ ತಂಡಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜರ್ಮನಿ ಹಾಗೂ ಬ್ರೆಜಿಲ್ ಇಂದು ತಮ್ಮ ಅಭಿಯಾನವನ್ನು ಆರಂಭಿಸಲಿವೆ. ಎರಡೂ ತಂಡಗಳಿಗೆ ಮೊದಲ ಪಂದ್ಯದಲ್ಲೇ ಕಠಿಣ ಸವಾಲು ಎದುರಾಗಿವೆ.
ಈ ಮಹತ್ವದ ಪಂದ್ಯಗಳು ಫುಟ್ಬಾಲ್ ಅಭಿಮಾನಿಗಳ ಕುತೂಹಲ ಕೆರಳಿಸಿದ್ದು, ಸೂಪರ್ ಸಂಡೇಗಾಗಿ ವಿಶ್ವದೆಲ್ಲೆಡೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಹಾಲಿ ಚಾಂಪಿಯನ್ ಜರ್ಮನಿ ಮಾಸ್ಕೋದಲ್ಲಿ ಟ್ರೋಫಿ ಉಳಿಸಿಕೊಳ್ಳಲು ಅಭಿಯಾನ ಆರಂಭಿಸಲಿದೆ. ‘ಎಫ್’ ಗುಂಪಿನ ಪಂದ್ಯದಲ್ಲಿ ಅನುಭವಿ ಹಾಗೂ ಬಲಿಷ್ಠ ತಂಡ ಮೆಕ್ಸಿಕೋ ವಿರುದ್ಧ ಸೆಣಸಲಿರುವ ಜರ್ಮನಿ ಶುಭಾರಂಭ ಮಾಡಲು ಹೆಚ್ಚಿನ ಶ್ರಮ ವಹಿಸಬೇಕಿದೆ. ಟೂರ್ನಿ ಆರಂಭಕ್ಕೂ ಮುನ್ನ ಅನಗತ್ಯ ವಿವಾದದಲ್ಲಿ ಸಿಲುಕಿದ್ದ ಕೆಲ ಪ್ರಮುಖ ಆಟಗಾರರು, ಆ ಘಟನೆಯನ್ನು ಮರೆತು ಕಣಕ್ಕಿಳಿಯಬೇಕಿದೆ. ಮೆಸುಟ್ ಓಜಿಲ್ ಹಾಗೂ ಇಲ್ಕೇ ಗುಂಡೊಗನ್, ಟರ್ಕಿ ಅಧ್ಯಕ್ಷರೊಂದಿಗೆ ಫೋಟೋ ತೆಗಿಸಿಕೊಂಡಿದ್ದಕ್ಕೆ ಜರ್ಮನಿ ಅಭಿಮಾನಿಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಮಾಧ್ಯಮಗಳಲ್ಲೂ ಸಹ ಈ ಇಬ್ಬರು ಪ್ರಮುಖ ಆಟಗಾರರ ಬಗ್ಗೆ ನಕಾರಾತ್ಮಕ ವರದಿಗಳು ಪ್ರಸಾರವಾಗಿದ್ದವು.
ಅರ್ಹತಾ ಸುತ್ತಿನಲ್ಲಿ ಅತ್ಯಧಿಕ ಅಂಕ ಕಲೆಹಾಕಿದ ಜರ್ಮನಿ, ಬಳಿಕ ಲಯ ಕಳೆದುಕೊಂಡಿದೆ. 56 ವರ್ಷಗಳ ಬಳಿಕ ಸತತ 2ನೇ ಬಾರಿಗೆ ಟ್ರೋಫಿ ಗೆಲ್ಲುವ ತಂಡ ಎಂದು ಕರೆಸಿಕೊಳ್ಳಲು ಪಣತೊಟ್ಟಿರುವ ಜರ್ಮನಿಗೆ ಲಯದ್ದೇ ಚಿಂತೆಯಾಗಿದೆ. 1962ರಲ್ಲಿ ಬ್ರೆಜಿಲ್ ಯಶಸ್ವಿಯಾಗಿ ಕಪ್ ಉಳಿಸಿಕೊಂಡಿತ್ತು. ಆದರೆ ಈ ಬಾರಿ ಜರ್ಮನಿಗೆ ಸುಲಭವಾಗಿ ಟ್ರೋಫಿ ಒಲಿಯುವ ಸಾಧ್ಯತೆ ಕಡಿಮೆ. ಅನುಭವಿ ಹಾಗೂ ಆಕ್ರಮಣಕಾರಿ ಗೋಲ್ ಕೀಪರ್ ಮ್ಯಾನುಯಲ್ ನೋಯರ್ ಗಾಯದಿಂದ ಚೇತರಿಸಿಕೊಂಡು 8 ತಿಂಗಳ ಬಳಿಕ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜರ್ಮನಿ ಆತ್ಮವಿಶ್ವಾಸ ಹೆಚ್ಚಿಸಿದೆ. ರಿಯಲ್ ಮ್ಯಾಡ್ರಿಡ್ ತಾರೆ ಟೋನಿ ಕ್ರೂಸ್ ಮಿಡ್‌ಫೀಲ್ಡ್‌ನ ಪ್ರಮುಖ ಆಟಗಾರನೆನಿಸಿದ್ದು, ಗೋಲ್ ಮಷಿನ್ ಎಂದೇ ಕರೆಸಿಕೊಳ್ಳುವ ಥಾಮಸ್ ಮುಲ್ಲರ್ ಮೇಲೆ ತಂಡ ಹೆಚ್ಚು ನಿರೀಕ್ಷೆ ಇರಿಸಿದೆ. ಮೆಸುಟ್ ಓಜಿಲ್ ಸಹ ಪ್ರಮುಖ ಪಾತ್ರ ವಹಿಸಬೇಕಿದೆ.
ಮತ್ತೊಂದಡೆ ಜರ್ಮನಿ ರೀತಿಯಲ್ಲೇ ಅರ್ಹತಾ ಸುತ್ತಿನ್ನು ಸುಲಭವಾಗಿ ದಾಟಿ, ಸತತ 7ನೇ ಬಾರಿಗೆ ವಿಶ್ವಕಪ್‌ಗೆ ಪ್ರವೇಶಿಸಿರುವ ಮೆಕ್ಸಿಕ್ಸೋ ಅನುಭವಿಗಳಿಂದ ಕೂಡಿದೆ. ಈ ಟೂರ್ನಿ ಬಳಿಕ ನಿವೃತ್ತಿಯಾಗಲಿರುವ ರಾಫೆಲ್ ಮಾರ್ಕೆಜ್, ಆ್ಯಂಟೋನಿಯೋ ಕರ್ಬಜಲ್ ಸತತ 5ನೇ ವಿಶ್ವಕಪ್‌ನಲ್ಲಿ ಆಡುತ್ತಿದ್ದಾರೆ. ತಂಡದ ಗೋಲ್ ಕೀಪರ್ ಗ್ಯುಲೆರ್ಮೊ ಒಚಾವೊ ಕಳೆದ ವಿಶ್ವಕಪ್‌ನಲ್ಲಿ ಅತ್ಯಮೋಘ ಪ್ರದರ್ಶನದ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಈ ಬಾರಿಯೂ ತಂಡ ನಾಕೌಟ್ ಹಂತಕ್ಕೇರಬೇಕಿದ್ದರೆ, ಒಚಾವೊ ಪ್ರದರ್ಶನ ಮಹತ್ವದಾಗಲಿದೆ.