ಮಾಸ್ಕೋ(ಜು.7): ಹ್ಯಾರಿ ಮ್ಯಾಗೂರೆ ಹಾಗೂ ಡೆಲೆ ಅಲ್ಲಿ ಬಾರಿಸಿದ ಎರಡು ಆಕರ್ಷಕ ಗೋಲುಗಳ ನೆರವಿನಿಂದ ಇಂಗ್ಲೆಂಡ್ ತಂಡ ಸ್ವಿಡನ್ ತಂಡವನ್ನು 2-0 ಗೋಲುಗಳಿಂದ ಮಣಿಸಿ ಸೆಮಿಫೈನಲ್ಸ್’ಗೆ ಲಗ್ಗೆಯಿಟ್ಟಿದೆ.  

ಪಂದ್ಯದ ಮೊದಲಾರ್ಧದಲ್ಲಿ ಉಭಯ ತಂಡಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಕಷ್ಟು ಪ್ರಯತ್ನಿಸಿದವು. ಆದರೆ ಪಂದ್ಯದ 30ನೇ ನಿಮಿಷದಲ್ಲಿ ಹ್ಯಾರಿ ಮ್ಯಾಗೂರೆ ಮೊದಲ ಗೋಲು ಗಳಿಸುವ ಮೂಲಕ ಸ್ವಿಡನ್ ತಂಡಕ್ಕೆ ಆಘಾತ ನೀಡಿದರು. ಆ ಬಳಿಕ ದ್ವಿತಿಯಾರ್ಧದಲ್ಲಿ ಕೂಡ ಡೆಲೆ ಅಲ್ಲಿ ಪಂದ್ಯದ 59ನೇ ನಿಮಿಷದಲ್ಲಿ ಇಗ್ಲೆಂಡ್ ಪರ ಮತ್ತೊಂದು ಗೋಲು ಬಾರಿಸಿದರು. 

ಇನ್ನು ಧ್ವಿತಿಯಾರ್ಧದಲ್ಲಿ ಸ್ವಿಡನ್ ಆಕ್ರಮಣಕಾರಿ ಆಟವಾಡಲು ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಆದರೂ ಸ್ವಿಡನ್ ಯಶಸ್ಸು ಕಾಣಲಿಲ್ಲ. ಈ ಮೂಲಕ ಇಂಗ್ಲೆಂಡ್ 2-0 ಮುನ್ನಡೆ ಕಾಯ್ದುಕೊಂಡಿತು. ಆ ಬಳಿಕ ರಕ್ಷಣಾತ್ಮಕ ಆಟಕ್ಕೆ ಮೊರೆಹೋದ ಇಂಗ್ಲೆಂಡ್ ತಂಡ ಸ್ವಿಡನ್ ಗೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ 2-0 ಅಂತರದ ಭರ್ಜರಿ ಜಯ ಸಾಧಿಸಿತು.

ಇನ್ನು ಇಂಗ್ಲೆಂಡ್ ತಂಡವು ಕ್ರೋಯೇಶಿಯಾ ಅಥವಾ ರಷ್ಯಾ ತಂಡದ ವಿರುದ್ದ ಜುಲೈ 11ರಂದು ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಕಾದಾಡಲಿದೆ.