ಲಿಯೋನೆಲ್ ಮೆಸ್ಸಿಗೆ ಒಲಿದ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿ
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಫಿಫಾ ವರ್ಷದ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನು ಹಿಂದಿಕ್ಕಿ ಮೆಸ್ಸಿ ಪ್ರಶಸ್ತಿ ಜಯಿಸುವಲ್ಲಿ ಯಶಸ್ವಿಯಾದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮಿಲಾನ್ (ಸೆ.25): ಅರ್ಜೆಂಟೀನಾದ ತಾರೆ ಲಿಯೋನೆಲ್ ಮೆಸ್ಸಿ ಚೊಚ್ಚಲ ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪೋರ್ಚುಗಲ್‌ನ ಕ್ರಿಸ್ಟಿಯಾನೋ ರೊನಾಲ್ಡೋರನ್ನು ಹಿಂದಿಕ್ಕಿ ಮೆಸ್ಸಿ ಪ್ರಶಸ್ತಿ ಗೆದ್ದರು.
ಕಳೆದ ಋತುವಿನ ಚಾಂಪಿಯನ್ಸ್ ಲೀಗ್‌ನಲ್ಲಿ ಮೆಸ್ಸಿ 12 ಗೋಲುಗಳನ್ನು ಗಳಿಸಿದ್ದರು. 2019ರ ಕೋಪಾ ಅಮೆರಿಕ ಟೂರ್ನಿಯಲ್ಲಿ ಅರ್ಜೆಂಟೀನಾ ಕಂಚಿನ ಪದಕ ಗೆಲ್ಲುವಲ್ಲಿ ಮೆಸ್ಸಿ ಪ್ರಮುಖ ಪಾತ್ರ ವಹಿಸಿದ್ದರು. ಫಿಫಾ ವರ್ಷದ ಫುಟ್ಬಾಲಿಗ ಪ್ರಶಸ್ತಿಗೆ ಮೆಸ್ಸಿ ಸೇರಿದಂತೆ ವಿರ್ಜಿಲ್ ವ್ಯಾನ್ ಡಿಜ್ಕ್ ಹಾಗೂ ಕ್ರಿಸ್ಟಿಯಾನೋ ರೊನಾಲ್ಡೋ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಆದರೆ ಕೊನೆಗೆ ಪ್ರಶಸ್ತಿ ಮೆಸ್ಸಿ ಪಾಲಾಗಿದೆ.
ಆಯ್ಕೆ ಹೀಗಿತ್ತು: ಫುಟ್ಬಾಲ್ ತಂಡದ ನಾಯಕರು, ಕೋಚ್’ಗಳು, ಆಯ್ದ ಪತ್ರಕರ್ತರು ಹಾಗೂ ಫಿಫಾ ಸದಸ್ಯರಿಗೆ ಮತ ಚಲಾಯಿಸುವ ಅವಕಾಶ ನೀಡಲಾಗಿತ್ತು. ಈ ಎಲ್ಲರಿಗೂ ಮೂರು ಆಯ್ಕೆಗಳನ್ನು ನೀಡಲಾಗಿತ್ತು. ಮೂವರು ಆಟಗಾರರಿಗೂ ಈ ಎಲ್ಲರೂ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಮೊದಲ ಆಯ್ಕೆಗೆ 5 ಅಂಕ, ಎರಡನೇ ಆಯ್ಕೆಗೆ 3 ಅಂಕ ಹಾಗೂ ಮೂರನೇ ಆಯ್ಕೆಗೆ ಒಂದು ಅಂಕವೆಂದು ನಿಗದಿ ಪಡಿಸಲಾಗಿತ್ತು.
ಮಜಾ ಅಂದರೆ ಮೆಸ್ಸಿ ರೊನಾಲ್ಡೋ ಪರ ಮತ ಚಲಾಯಿಸಿದರೂ ಕೂಡಾ ವರ್ಷದ ಫುಟ್ಬಾಲಿಗ ಎನಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೆಸ್ಸಿ ಕಳೆದ ಆವೃತ್ತಿಯಲ್ಲಿ ಸ್ಪ್ಯಾನಿಷ್ ಲಾ ಲಿಗಾ ಪ್ರಶಸ್ತಿ, ಯೂರೋಪಿಯನ್ ಗೋಲ್ಡನ್ ಬೂಟ್ ಪ್ರಶಸ್ತಿ ಜತೆಗೆ ದಾಖಲೆಯ ಆರನೇ ಬಾರಿಗೆ ಫಿಫಾ ವರ್ಷದ ಆಟಗಾರ ಎನ್ನುವ ಗೌರವಕ್ಕೂ ಭಾಜನರಾಗಿದ್ದರು. 2015ರಲ್ಲಿ ಮೆಸ್ಸಿ ಕಡೆಯ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.
ಇನ್ನು ಮಹಿಳಾ ವರ್ಷದ ಫುಟ್ಬಾಲ್ ಆಟಗಾರ್ತಿಯಾಗಿ 34 ವರ್ಷದ ಅಮೆರಿಕಾದ ಮೆಘಾನ್ ರ‍್ಯಾಪಿನೋ ಆಯ್ಕೆಯಾಗಿದ್ದಾರೆ.