ಫಿಫಾ ವಿಶ್ವಕಪ್ 2018: ಅಂತಿಮ ಕ್ಷಣದಲ್ಲಿ ಈಜಿಪ್ಟ್‌ಗೆ ಶಾಕ್ ನೀಡಿದ ಉರುಗ್ವೆ
ಫಿಫಾ ವಿಶ್ವಕಪ್ ಟೂರ್ನಿಯ ದ್ವಿತೀಯ ಪಂದ್ಯದಲ್ಲಿ ಉರುಗ್ವೆ ತಂಡ ಗೆಲುವು ದಾಖಲಿಸಿದೆ. ಪಂದ್ಯದ ಅಂತಿಮ ಕ್ಷಣದಲ್ಲಿ ಗೋಲು ಸಿಡಿಸಿದ ಉರುಗ್ವೆ 38 ವರ್ಷಗಳ ಬಳಿಕ ದಾಖಲೆ ಬರೆಯಿತು. ಉರುಗ್ವೆ ಬರೆದ ದಾಖಲೆ ಏನು? ಇಲ್ಲಿದೆ ನೋಡಿ.
ರಷ್ಯಾ(ಜೂ.15): ಫಿಫಾ ವಿಶ್ವಕಪ್ ಟೂರ್ನಿಯ 2ನೇ ಪಂದ್ಯದಲ್ಲಿ ಉರುಗ್ವೆ ಶುಭಾರಂಭ ಮಾಡಿದೆ. ಈಜಿಪ್ಟ್ ವಿರುದ್ಧ ನಡೆದ ರೋಚಚಕ ಹೋರಾಟದಲ್ಲಿ ಉುರುಗ್ವೆ 1-0 ಗೋಲಿನ ಅಂತರದಲ್ಲಿ ಗೆಲುವಿನ ನಗೆ ಬೀರಿದೆ.
What a finish! #WorldCup@Uruguay leave it late, but do enough to get the win. #EGYURU 0-1 pic.twitter.com/UmKN1f6YwO
— FIFA World Cup 🏆 (@FIFAWorldCup) June 15, 2018
ಎಕಟೇರಿನ್‌ಬರ್ಗ್ ಅರೇನಾದಲ್ಲಿ ನಡೆದ ಫಿಫಾ ವಿಶ್ವಕಪ್ ದ್ವಿತೀಯ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಈಜಿಪ್ಟ್ ತಂಡಕ್ಕೆ ಶಾಕ್ ನೀಡುವಲ್ಲಿ ಉರುಗ್ವೆ ಯಶಸ್ವಿಯಾಗಿದೆ. ಪಂದ್ಯದ ಆರಂಭದಲ್ಲೇ ಉರುಗ್ವೆ ಹಲವು ಅವಕಾಶಗಳನ್ನ ಕಳೆದುಕೊಂಡಿತು.
ಉರುಗ್ವೆ ಸ್ಟಾರ್ ಆಟಗಾರರಾದ ಲೋಯಿಸ್ ಸೌರೆಜ್, ಎಡಿನ್ಸನ್ ಕವಾನಿ ಗೋಲು ಸಿಡಿಸೋ ಅವಕಾಶವನ್ನ ಕೈಚೆಲ್ಲಿದರು. ಉರುಗ್ವೆ ಆಕ್ರಮಣಕಾರಿ ಆಟಕ್ಕೆ ಈಜಿಪ್ಟ್ ಬೆಚ್ಚಿಬಿದ್ದಿತು. ಆದರೆ ಉಭಯ ತಂಡಗಳು ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲಾರ್ಧ 0-0 ಯಿಂದ ಅಂತ್ಯವಾಯಿತು.
ದ್ವಿತಿಯಾರ್ಧದಲ್ಲಿ ಈಜಿಪ್ಟ್ ಸ್ಟಾರ್ ಪ್ಲೇಯರ್ ಮೊಹಮ್ಮದ್ ಸಲಾಹ್ ಮೈದಾನಕ್ಕೆ ಆಗಮಿಸೋ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆಯಾಯಿತು. ಸಲಾಹ್ ಕಣಕ್ಕಿಳಿಯಲೇ ಇಲ್ಲ. ಇನ್ನೇನು ಪಂದ್ಯ ಅಂತಿಮ ಹಂತಕ್ಕೆ ತಲುಪಿದರೂ ಗೋಲು ದಾಖಲಾಗಲಿಲ್ಲ. ಆದರೆ 89ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್ ಅವಕಾಶವನ್ನ ಬಳಸಿಕೊಂಡ ಉರುಗ್ವೆ ಗೋಲು ಸಿಡಿಸಿ 1-0 ಮುನ್ನಡೆ ಪಡೆದುಕೊಂಡಿತು.
ಡಿಫೆಂಡರ್ ಜೋಸೆ ಮರಿಯಾ ಗಿಮೆನ್ಜ್ ಅದ್ಬುತ ಹೆಡರ್ ಮೂಲಕ ಗೋಲು ಬಾರಿಸಿದರು. ಹೀಗಾಗಿ ಅಂತಿಮ 5 ನಿಮಿಷದ ಹೆಚ್ಚುವರಿ ಸಮಯ ಮತ್ತಷ್ಟು ರೋಚಕವಾಗಿ ಮಾರ್ಪಟ್ಟಿತ್ತು. ಉರುಗ್ವೆ 1-0 ಅಂತರದಲ್ಲಿ ಪಂದ್ಯ ಗೆದ್ದು ದಾಖಲೆ ಬರೆಯಿತು. 1970ರ ಬಳಿಕ ಇದೇ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿತು.