2 ದಶಕಗಳ ಬಳಿಕ ಸೆಮಿಫೈನಲ್‌ ಪ್ರವೇಶಿಸಿದ ಭಾರತೀಯ ಪ್ರಜ್ಞಾನಂದಸೆಮೀಸ್‌ನಲ್ಲಿ ವಿಶ್ವ ನಂ.2 ಅಮೆರಿಕದ ಫ್ಯಾಬಿಯಾನೋ ಕರುವಾನಾ ವಿರುದ್ಧ ಸೆಣಸಾಟಶನಿವಾರ ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದ್ದು, 2ನೇ ಸುತ್ತು ಭಾನುವಾರ ನಿಗದಿಯಾಗಿದೆ

ಬಾಕು(ಅಜರ್‌ಬೈಜಾನ್): ಫಿಡೆ ಚೆಸ್‌ ವಿಶ್ವಕಪ್‌ನಲ್ಲಿ 2 ದಶಕಗಳ ಬಳಿಕ ಸೆಮಿಫೈನಲ್‌ ಪ್ರವೇಶಿಸಿದ ಭಾರತೀಯ ಎನಿಸಿರುವ ಯುವ ಗ್ರ್ಯಾಂಡ್‌ಮಾಸ್ಟರ್‌ ಆರ್‌.ಪ್ರಜ್ಞಾನಂದ ಅವರು, ಶನಿವಾರದಿಂದ ಸೆಮೀಸ್‌ನಲ್ಲಿ ವಿಶ್ವ ನಂ.2 ಅಮೆರಿಕದ ಫ್ಯಾಬಿಯಾನೋ ಕರುವಾನಾ ವಿರುದ್ಧ ಸೆಣಸಲಿದ್ದಾರೆ. 

ಶನಿವಾರ ಮೊದಲ ಸುತ್ತಿನ ಸ್ಪರ್ಧೆ ನಡೆಯಲಿದ್ದು, 2ನೇ ಸುತ್ತು ಭಾನುವಾರ ನಿಗದಿಯಾಗಿದೆ. ಎರಡೂ ಸುತ್ತು ಡ್ರಾಗೊಂಡರೆ ಆಗಸ್ಟ್ 21ಕ್ಕೆ ಟೈ ಬ್ರೇಕರ್‌ ನಡೆಯಲಿದೆ. ಪ್ರಜ್ಞಾನಂದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದವರೇ ಆದ ಅರ್ಜುನ್‌ ಎರಿಗೈಸಿ ವಿರುದ್ಧ ಟೈ ಬ್ರೇಕರ್‌ನ ಸಡನ್‌ ಡೆತ್‌ನಲ್ಲಿ ಗೆದ್ದಿದ್ದರು. ಇನ್ನು, ಶನಿವಾರ ಆರಂಭವಾಗಲಿರುವ ಮತ್ತೊಂದು ಸೆಮೀಸ್‌ನಲ್ಲಿ ವಿಶ್ವ ನಂ.1 ಮ್ಯಾಗ್ನಸ್‌ ಕಾರ್ಲ್‌ಸನ್‌, ಅಜರ್‌ಬೈಜಾನ್‌ನ ನಿಜಾತ್‌ ಅಬಸೊವ್‌ ಮುಖಾಮುಖಿಯಾಗಲಿದ್ದಾರೆ.

ಡೋಪ್‌: ದ್ಯುತಿ ಚಂದ್‌ಗೆ ನಾಡಾ 4 ವರ್ಷ ನಿಷೇಧ

ನವದೆಹಲಿ: ನಿಷೇಧಿತ ಮದ್ದು ಸೇವಿಸಿದ್ದು ಕಂಡುಬಂದ ಹಿನ್ನೆಲೆಯಲ್ಲಿ ಭಾರತದ ತಾರಾ ಓಟಗಾರ್ತಿ, ಎರಡು ಬಾರಿ ಏಷ್ಯನ್‌ ಗೇಮ್ಸ್‌ ಪದಕ ವಿಜೇತೆ ದ್ಯುತಿ ಚಂದ್‌ಗೆ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಘಟಕ(ನಾಡಾ) 4 ವರ್ಷ ನಿಷೇಧ ಹೇರಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ 2 ಬಾರಿ ದ್ಯುತಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 2 ಮಾದರಿಗಳಲ್ಲೂ ನಿಷೇಧಿತ ಮದ್ದು ಸೇವನೆ ಪತ್ತೆಯಾಗಿದ್ದರಿಂದ ನಿಷೇಧ ಹೇರಲಾಗಿದೆ. ಅವರ ನಿಷೇಧ ಅವಧಿ ಜನವರಿ 3ರಿಂದಲೇ ಆರಂಭಗೊಂಡಿದೆ ಎಂದು ನಾಡಾ ತಿಳಿಸಿದೆ. ಆದರೆ ಉದ್ದೇಶಪೂರ್ವಕವಾಗಿ ನಿಷೇಧಿತ ಮದ್ದು ಸೇವಿಸಿಲ್ಲ ಎಂದು ದ್ಯುತಿ ತಿಳಿಸಿದ್ದು, ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.

ಸೌದಿಯಲ್ಲಿ ನೇಯ್ಮರ್‌ಗೆ 25 ಬೆಡ್‌ರೂಂ ಮನೆ, 3 ಐಷಾರಾಮಿ ಕಾರುಗಳು, ಖಾಸಗಿ ವಿಮಾನ!

ರಿಯಾದ್‌: ಕೆಲ ದಿನಗಳ ಹಿಂದಷ್ಟೇ ಸೌರಿ ಅರೇಬಿಯಾದ ಅಲ್‌-ಹಿಲಾಲ್‌ ಫುಟ್ಬಾಲ್‌ ಕ್ಲಬ್‌ಗೆ ಸೇರ್ಪಡೆಗೊಂಡ ಬ್ರೆಜಿಲ್‌ನ ದಿಗ್ಗಜ ಆಟಗಾರ ನೇಯ್ಮರ್‌ಗೆ ಸಿಗಲಿರುವ ಸೌಲಭ್ಯಗಳ ವಿವರ ಫುಟ್ಬಾಲ್‌ ಅಭಿಮಾನಿಗಳನ್ನು ದಂಗಾಗಿಸಿದೆ. ಪ್ರತಿಷ್ಠಿತ ಮಾಧ್ಯಮಗಳ ವರದಿ ಪ್ರಕಾರ, ನೇಯ್ಮರ್‌ಗೆ 2 ವರ್ಷಕ್ಕೆ 1457 ಕೋಟಿ ರು. ವೇತನದ ಜೊತೆಗೆ ಇನ್ನಷ್ಟು ದುಬಾರಿ ಸವಲತ್ತುಗಳು ದೊರೆಯಲಿವೆ.

ನೇಯ್ಮರ್‌ ಹಾಗೂ ಕುಟುಂಬಸ್ಥರು ಉಳಿದುಕೊಳ್ಳಲು 25 ಬೆಡ್‌ರೂಂಗಳಿರುವ ಮನೆ ನೀಡುವುದಾಗಿ ಅಲ್-ಹಿಲಾಲ್‌ ತಂಡದ ಮಾಲಿಕರು ತಿಳಿಸಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ 24 ಗಂಟೆ ಕಾಲ ಕನಿಷ್ಠ 5 ಸಿಬ್ಬಂದಿ, ಒಲಿಂಪಿಕ್ಸ್‌ನಲ್ಲಿ ಬಳಸುವಷ್ಟು ದೊಡ್ಡ ಈಜುಕೊಳ, ಬೆನ್ಟ್ಲೆ ಕಾಂಟಿನೆಂಟಲ್‌ ಜಿಟಿ, ಆ್ಯಸ್ಟನ್‌ ಮಾರ್ಟಿನ್‌ ಡಿಬಿಎಕ್ಸ್‌, ಲ್ಯಾಂಬೊರ್ಗಿನಿ ಐಷಾರಾಮಿ ಕಾರುಗಳು, 24 ಗಂಟೆ ಲಭ್ಯವಿರುವ ಚಾಲಕರು, ತಮ್ಮ ಕುಟುಂಬದೊಂದಿಗೆ ಪ್ರಯಾಣಿಸಲು ಖಾಸಗಿ ವಿಮಾನ ವ್ಯವಸ್ಥೆಯನ್ನು ತಂಡ ಕಲ್ಪಿಸಲಿದೆ.

ಇಂದಿನಿಂದ ವಿಶ್ವ ಅಥ್ಲೆಟಿಕ್ಸ್ ಕೂಟ; ನೀರಜ್‌ ಚೋಪ್ರಾ ಮೇಲೆ ನಿರೀಕ್ಷೆ

ರೆಸ್ಟೋರೆಂಟ್‌ ಹಾಗೂ ಇತರೆ ಶಾಪಿಂಗ್‌ ಬಿಲ್‌ಗಳನ್ನೂ ತಾನೇ ಪಾವತಿಸುವುದಾಗಿ ತಂಡ ತಿಳಿಸಿದೆ ಎನ್ನಲಾಗಿದ್ದು, ಅಲ್‌-ಹಿಲಾಲ್‌ ತಂಡ ಪ್ರತಿ ಪಂದ್ಯ ಗೆದ್ದಾಗ ನೇಯ್ಮರ್‌ಗೆ ಅಂದಾಜು 75 ಲಕ್ಷ ರು. ಬೋನಸ್‌ ಸಿಗಲಿದೆ. ಸೌದಿ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮಾಡುವ ಪ್ರತಿ ಪೋಸ್ಟ್‌ಗೆ 5 ಲಕ್ಷ ಅಮೆರಿಕನ್‌ ಡಾಲರ್‌(ಅಂದಾಜು 4.15 ಕೋಟಿ ರು.) ನೀಡಲು ತಂಡ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.