ನವದೆಹಲಿ(ಸೆ.13): ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ತಂಡದಲ್ಲಿ ಹೆಚ್ಚೇನು ಬದಲಾವಣೆ ಮಾಡದಿದ್ದರೂ ಬಿಸಿಸಿಐ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆಯ್ಕೆ ಮಾಡಿರುವುದು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳಿಗೆ ಹುಬ್ಬೇರುವಂತೆ ಮಾಡಿದೆ.
ಪ್ರಸಕ್ತ ದುಲೀಪ್ ಟ್ರೋಫಿಯಲ್ಲಿಯಲ್ಲಿ ಭರ್ಜರಿ ಫಾರ್ಮ್'ನಲ್ಲಿರುವ ದೆಹಲಿ ಎಡಗೈ ಬ್ಯಾಟ್ಸ್'ಮನ್ ಗೌತಮ್ ಗಂಭೀರ್ ಅವರನ್ನು ಆಯ್ಕೆಗಾರರು ಕಡೆಗಣಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ತಂಡಕ್ಕೆ ಆಯ್ಕೆಯಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಗಂಭೀರ್ 'ನಾನು ನಿರಾಸೆಗೊಳಗಾಗಿದ್ದು ನಿಜ, ಆದರೆ ಸೋತಿಲ್ಲ. ನನ್ನ ಪ್ರಯತ್ನವನ್ನು ಮುಂದುವರೆಸುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.
ಈ ನಂತರ ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐಗೆ ಟೀಕೆಯ ಸುರಿಮಳೆಗೈದಿದ್ದಾರೆ.
ವಿರಾಟ್ ಕೊಹ್ಲಿ ಮತ್ತೆ ತಮ್ಮ ಮೊಂಡುತನವನ್ನು ಪ್ರದರ್ಶಿಸಿದ್ದಾರೆ. ಶಿಖರ್ ಧವನ್'ಗಿಂತ ಗಂಭೀರ್ ಆರ್ಹರಾಗಿದ್ದರು, ವೈಯಕ್ತಿಕ ವಿಚಾರ ಬೇರೆ, ವೃತ್ತಿ ಜೀವನ ಬೇರೆ ಅವೆರಡನ್ನು ಮಿಕ್ಸ್ ಮಾಡಬೇಡಿ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.
