ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್, ಒಟ್ಟು 52 ಟೆಸ್ಟ್ ಪಂದ್ಯಗಳನ್ನಾಡಿದ್ದು 292 ವಿಕೆಟ್ ಕಬಳಿಸಿದ್ದಾರೆ.

ಚೆನ್ನೈ(ಅ.21): ಸೀಮಿತ ಓವರ್'ಗಳ ಟೂರ್ನಿಯಿಂದ ಪದೇಪದೇ ಹೊರಗುಳಿಯುತ್ತಿರುವ ರವಿಚಂದ್ರನ್ ಅಶ್ವಿನ್ ತಮ್ಮ ಭವಿಷ್ಯದ ಕ್ರಿಕೆಟ್ ಜೀವನದ ಬಗ್ಗೆ ತುಟಿ ಬಿಚ್ಚಿದ್ದಾರೆ.

ಟೀಂ ಇಂಡಿಯಾದ ಟೆಸ್ಟ್ ಕ್ರಿಕೆಟ್'ನಲ್ಲಿ ಮುಂಚೂಣಿ ಬೌಲರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್'ನಲ್ಲೇ ಮುಂದುವರೆಯುವ ಮುನ್ಸೂಚನೆ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಎಂದರೆ ನನಗೆ ಅಪಾರ ಗೌರವ, ಅವರ ದಾಖಲೆ ಮುರಿಯುವ ಯಾವುದೇ ಆಸೆ ತನಗಿಲ್ಲ. ಒಂದೊಮ್ಮೆ ನಾನು 618 ವಿಕೆಟ್ ಪಡೆದರೆ, ಅದೇ ನನ್ನ ಅಂತಿಮ ಟೆಸ್ಟ್ ಪಂದ್ಯವಾಗಲಿದೆ ಎಂದು ಆಫ್‌'ಸ್ಪಿನ್ನರ್ ಆರ್.ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.

ಟೆಸ್ಟ್‌'ನಲ್ಲಿ ಅನಿಲ್ ಕುಂಬ್ಳೆ 619 ವಿಕೆಟ್ ಕಬಳಿಸಿದ್ದು, ಈ ದಾಖಲೆ ಮುರಿಯುವ ಇಚ್ಛೆ ತಮಗೆ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಶ್ವಿನ್, ‘ನನಗೆ ಆ ರೀತಿಯ ಯಾವುದೇ ಆಸೆಯಿಲ್ಲ. ಒಂದೊಮ್ಮೆ ನಾನು ಟೆಸ್ಟ್‌ನಲ್ಲಿ 618 ವಿಕೆಟ್ ಪಡೆದರೆ, ತಕ್ಷಣವೇ ಟೆಸ್ಟ್‌'ಗೆ ವಿದಾಯ ಘೋಷಿಸುವುದಾಗಿ’ ಹೇಳಿದ್ದಾರೆ.

ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿರುವ ಅಶ್ವಿನ್, ಒಟ್ಟು 52 ಟೆಸ್ಟ್ ಪಂದ್ಯಗಳನ್ನಾಡಿದ್ದು 292 ವಿಕೆಟ್ ಕಬಳಿಸಿದ್ದಾರೆ.

ಇದೇವೇಳೆ ತಮ್ಮ ರೋಲ್ ಮಾಡೆಲ್'ಗಳ ಪೈಕಿ ಒಬ್ಬರಾದ ಶ್ರೀಲಂಕಾ ತಂಡದ ಅನುಭವಿ ಸ್ಪಿನ್ನರ್ ರಂಗನಾ ಹೆರಾತ್ ಅವರನ್ನು ಗುಣಗಾನ ಮಾಡಿರುವ ಅಶ್ವಿನ್, 'ನನ್ನ ಪ್ರಕಾರ ಅವರೊಬ್ಬ ಅದ್ಭುತ ಬೌಲರ್. ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಹೆರಾತ್ ನಿಜಕ್ಕೂ ಚಾಂಪಿಯನ್ ಬೌಲರ್' ಎಂದು ಅಶ್ವಿನ್ ಹೇಳಿದ್ದಾರೆ.