ರಾಜ್'ಕೋಟ್'ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್'ನ ಮೊದಲ ಇನಿಂಗ್ಸ್'ನ ಮೂರನೇ ದಿನ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ದಿನದಾಟ ಮುಕ್ತಾಯದ ವೇಳೆಗೆ ನಾಲ್ಕು ವಿಕೆಟ್ ನಷ್ಟಕ್ಕೆ 318 ರನ್ ಕಲೆಹಾಕಿದೆ.
ರಾಜ್‌ಕೋಟ್(ನ.11)ಆರಂಭಿಕ ಮುರಳಿ ವಿಜಯ್ (126 ರನ್, 301 ಎಸೆತ, 9 ಬೌಂಡರಿ, 4 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ಚೇತೇಶ್ವರ ಪೂಜಾರ (124 ರನ್, 206 ಎಸೆತ, 17 ಬೌಂಡರಿ) ಅವರ ಆಕರ್ಷಕ ಶತಕಗಳ ನೆರವಿನಿಂದಾಗಿ, ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ತನ್ನ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತ ಪೇರಿಸುವ ಆಶಾಕಿರಣ ಉದಯಿಸಿದೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಇಂದು ಗಂಭೀರ್ ಜತೆಗೆ ಭಾರತದ ಇನಿಂಗ್ಸ್ ಮುಂದುವರಿಸಿದ್ದ ಮುರಳಿ ವಿಜಯ್ ಇಡೀ ದಿನ ತಮ್ಮ ಉತ್ತಮ ಬ್ಯಾಟಿಂಗ್‌ನಿಂದಾಗಿ ಮನ ಸೆಳೆದರು. ಆದರೆ, ಅವರಿಗೆ ಮತ್ತೊಬ್ಬ ಆರಂಭಿಕ ಗೌತಮ್ ಗಂಭೀರ್ ಅವರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಪಂದ್ಯದ ಎರಡನೇ ದಿನ ಗುರುವಾರದ ಅಂತ್ಯಕ್ಕೆ 28 ರನ್ ಗಳಿಸಿ ಅಜೇಯರಾಗುಳಿದಿದ್ದ ಗಂಭೀರ್, ಶುಕ್ರವಾರ ದಿನದಾಟ ಆರಂಭವಾದ ನಂತರ ತಮ್ಮ ಖಾತೆಗೆ ಇನ್ನೊಂದು ರನ್ ಸೇರಿಸಿದ ಬೆನ್ನಲ್ಲೇ ಸ್ಟುವರ್ಟ್ ಬ್ರಾಡ್ ಅವರ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಒಳಗಾಗಿ ಪೆವಿಲಿಯನ್‌ಗೆ ಮರಳಿದರು. ಆಗ, ಮುರಳಿ ವಿಜಯ್ ಅವರನ್ನು ಕೂಡಿಕೊಂಡಿದ್ದು ಚೇತೇಶ್ವರ ಪೂಜಾರ.
ಕ್ರೀಸ್‌ನಲ್ಲಿದ್ದ ಮುರಳಿಯವರಿಗೆ ಉತ್ತಮ ಬೆಂಬಲಿಗರಾಗಿ ಮಹತ್ವದ ಬ್ಯಾಟಿಂಗ್ ಪ್ರದರ್ಶಿಸಿದ ಪೂಜಾರ, 2ನೇ ವಿಕೆಟ್‌ಗೆ ಬರೋಬ್ಬರಿ 209 ರನ್‌ಗಳ ಜತೆಯಾಟ ನೀಡಿದರು. ಈ ಇಬ್ಬರ ಈ ಅಮೋಘ ಜತೆಯಾಟದಿಂದಾಗಿ ಭಾರತ ತಂಡದ ಇನಿಂಗ್ಸ್ ಕೊಂಚ ಚೇತರಿಕೆ ಕಂಡಿತು. ಆಂಗ್ಲ ಬೌಲರ್‌ಗಳನ್ನು ತುಂಬಾ ಹೊತ್ತು ಕಾಡಿದ ಈ ಇಬ್ಬರೂ ಲೀಲಾಜಾಲವಾಗಿ ಬ್ಯಾಟ್ ಮಾಡಿದ್ದಲ್ಲದೆ ಸ್ಕೋರ್ ಬೋರ್ಡ್‌ನಲ್ಲಿ ರನ್ ಗಳಿಕೆಯನ್ನು ಗಣನೀಯವಾಗಿ ಹೆಚ್ಚಿಸಿದರು.
ಇನಿಂಗ್ಸ್‌ನ ಮೊತ್ತ 277 ರನ್ ಆಗಿದ್ದಾಗ ಪೂಜಾರ ವಿಕೆಟ್ ಒಪ್ಪಿಸಿ ಹೊರನಡೆಯುವ ಮೂಲಕ ಈ ಇಬ್ಬರ ದ್ವಿಶತಕದ ಜೊತೆಯಾಟಕ್ಕೆ ತೆರೆಬಿತ್ತು. 92ನೇ ಓವರ್‌ನಲ್ಲಿ ಸ್ಟೋಕ್ಸ್ ಅವರ ಎಸೆತದಲ್ಲಿ ಆಫ್ ಸೈಡ್'ನಲ್ಲಿ ವೈಡ್ ಸ್ಲಿಪ್'ನಲ್ಲಿದ್ದ ಕುಕ್ ಅವರಿಗೆ ಕ್ಯಾಚ್ ನೀಡಿದ ಪೂಜಾರ ತಮ್ಮ ಆಕರ್ಷಕ ಇನಿಂಗ್ಸ್ ಮುಗಿಸಿ ಪೆವಿಲಿಯನ್‌ನತ್ತ ಮುಖ ಮಾಡಿದರು. ಆಗ, ಕ್ರೀಸ್‌ಗೆ ಕಾಲಿಟ್ಟಿದ್ದು ನಾಯಕ ವಿರಾಟ್ ಕೊಹ್ಲಿ.
ಮುರಳಿ ವಿಜಯ್ ಹಾಗೂ ಕೊಹ್ಲಿ 3ನೇ ವಿಕೆಟ್‌ಗೆ ಕೇವಲ 41 ರನ್‌ಗಳನ್ನಷ್ಟೇ ಪೇರಿಸಲು ಸಾಧ್ಯವಾಯಿತು. ರಶೀದ್ ಮಾಡಿದ 108ನೇ ಓವರ್‌ನ ಕೊನೆಯ ಎಸೆತದಲ್ಲಿ ಹಮೀದ್‌ಗೆ ಕ್ಯಾಚ್ ನೀಡಿದ ಮುರಳಿ ವಿಜಯ್ ಕ್ರೀಸ್ ತೊರೆದಾಗ ಭಾರತದ ಮೊತ್ತ 318 ರನ್ ಆಗಿತ್ತು. ಇದಾದ ನಂತರ, ಅಮಿತ್ ಮಿಶ್ರಾ ಕೊಹ್ಲಿಯವರನ್ನು ಕೂಡಿಕೊಂಡರು. ಆದರೆ, ಅವರು ಹೆಚ್ಚು ಆಡಲಿಲ್ಲ. ಅನ್ಸಾರಿ ಮಾಡಿದ 109ನೇ ಓವರ್‌ನ ಮೂರನೇ ಎಸೆತದಲ್ಲಿ ಹಮೀದ್ ಅವರಿಗೆ ಕ್ಯಾಚಿತ್ತ ಮಿಶ್ರಾ ಬೇಗನೇ ಪೆವಿಲಿಯನ್ ಸೇರಿಕೊಂಡರು.
ದಿನಾಂತ್ಯದ ಹೊತ್ತಿಗೆ ವೈಯಕ್ತಿಕ 26 ರನ್ ಗಳಿಸಿರುವ ಕೊಹ್ಲಿ ಶನಿವಾರ ಅಜಿಂಕ್ಯ ರಹಾನೆ ಜತೆ ಇನಿಂಗ್ಸ್ ಮುಂದುವರಿಸಲಿದ್ದಾರೆ. ದಿನದಾಟದಲ್ಲಿ ತಮ್ಮ ಅಭಿಮಾನಿಗಳ ನಿರೀಕ್ಷೆಯಂತೆ ಸಿಡಿಯದಿರುವ ಅವರಿಂದ ಶನಿವಾರ ಭರ್ಜರಿ ಆಟದ ನಿರೀಕ್ಷೆಯನ್ನು ಟೀಂ ಇಂಡಿಯಾ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಇಂಗ್ಲೆಂಡ್ ಪ್ರಥಮ ಇನಿಂಗ್ಸ್ 537;
ಭಾರತ ಪ್ರಥಮ ಇನಿಂಗ್ಸ್ 4 ವಿಕೆಟ್‌ಗೆ 319 (ಗುರುವಾರ ದಿನಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 63)
(ಮುರಳಿ ವಿಜಯ್ 126, ಚೇತೇಶ್ವರ ಪೂಜಾರ 124; ಬ್ರಾಡ್ 54ಕ್ಕೆ 1, ರಶೀದ್ 47ಕ್ಕೆ 1).
