ಲಂಡನ್‌(ನ.05): ಇಂಗ್ಲೆಂಡ್‌ ಏಕದಿನ ತಂಡದ ನಾಯಕ ಇಯಾನ್‌ ಮೊರ್ಗನ್‌, ತಮ್ಮ ಬಹುಕಾಲದ ಪ್ರೇಯಸಿ ತಾರಾ ರಿಡ್ಜವೇರೊಂದಿಗೆ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಮರ್‌ಸೆಟ್‌ನಲ್ಲಿರುವ ಐತಿಹಾಸಿಕ ಬಾಬಿಂಗ್ಟನ್‌ ಹೌಸ್‌ನಲ್ಲಿ ಪ್ರತಿಜ್ಞೆ ಸ್ವೀಕರಿಸಿದ ಬಳಿಕ ಮಾರ್ಗನ್‌-ತಾರಾ ಜೋಡಿ ವಿವಾಹ ನೆರವೇರಿತು. 

ನ್ಯೂಜಿಲೆಂಡ್‌ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌, ಇಂಗ್ಲೆಂಡ್‌ ಮಾಜಿ ನಾಯಕ ಅಲಿಸ್ಟರ್‌ ಕುಕ್‌, ಕ್ರಿಕೆಟಿಗರಾದ ಜೇಸನ್‌ ರಾಯ್‌ ಮತ್ತು ಜೋಸ್‌ ಬಟ್ಲರ್‌ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.  ತಮ್ಮ 32ನೇ ವಯಸ್ಸಿನಲ್ಲಿ ಮಾರ್ಗನ್ ಬ್ಯಾಚ್ಯುಲರ್ ಲೈಫ್‌ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ಇಂಗ್ಲೆಂಡ್ ಪರ 16 ಟೆಸ್ಟ್ ಪಂದ್ಯದಿಂದ 700 ರನ್ ಸಿಡಿಸಿರುವ ಮಾರ್ಗನ್, ಏಕದಿನದಲ್ಲಿ 212 ಏಕದಿನ ಪಂದ್ಯದಿಂದ 6557 ರನ್ ಪೇರಿಸಿದ್ದಾರೆ. 11 ಶತಕ  ಹಾಗೂ 41 ಅರ್ಧಶತಕ ಬಾರಿಸಿದ್ದಾರೆ. ಇನ್ನು 77 ಟಿ20 ಪಂದ್ಯದಿಂದ 1734 ರನ್ ಸಿಡಿಸಿದ್ದಾರೆ. ಇಷ್ಟೇ ಅಲ್ಲ ನಿಗಧಿತ ಓವರ್ ಕ್ರಿಕೆಟ್‌ನಲ್ಲಿ ಮಾರ್ಗನ್ ನಾಯಕನಾಗಿಯು ಯಶಸ್ವಿಯಾಗಿದ್ದಾರೆ.