ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ ಕ್ರಿಕೆಟ್‌ನ ಕರಾಳ ಮುಖವನ್ನ ಬಹಿರಂಗ ಪಡಿಸಿದ್ದಾರೆ. ತಮ್ಮ ಕ್ರಿಕೆಟ್ ಕರಿಯರ್‌ನ ನೋವಿನ ದಿನಗಳನ್ನ ಬ್ರಾವೋ ಮೆಲುಕು ಹಾಕಿದ್ದಾರೆ.

ಜಮೈಕಾ(ನ.17): ವೆಸ್ಟ್ ಇಂಡೀಸ್ ಆಲ್ರೌಂಡರ್,ಮಾಜಿ ನಾಯಕ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬೆನ್ನಲ್ಲೇ, ವಿಂಡೀಸ್ ಕ್ರಿಕೆಟ್‌ನ ಕರಾಳ ಮುಖವನ್ನ ಬಹಿರಂಗ ಪಡಿಸಿದ್ದಾರೆ. 

ವೆಸ್ಟ್ ಇಂಡೀಸ್ ಕ್ರಿಕೆಟ್ ಹಾಗೂ ಆಟಗಾರರ ನಡುವಿನ ಹಗ್ಗ ಜಗ್ಗಾಟ ಇಂದು ನಿನ್ನೆಯದಲ್ಲ. ಒಪ್ಪಂದ ವಿಚಾರದಲ್ಲಿ ಕ್ರಿಕೆಟಿಗರು ಹಾಗೂ ಸಂಸ್ಥೆ ನಡುವೆ ಜಗಳ ನಡೆಯುತ್ತಲೇ ಇದೆ. ಇದು 2014ರಲ್ಲಿ ತಾರಕಕ್ಕೇರಿತ್ತು. ಆಟಗಾರರ ಪರ ನಿಂತ ನಾನು ಬಲಿಪಶುವಾದೆ ಎಂದು ಬ್ರಾವೋ ಹೇಳಿದ್ದಾರೆ.

2014ರಲ್ಲಿ ಭಾರತ ಪ್ರವಾಸ ಕೈಗೊಂಡ ಡ್ವೇನ್ ಬ್ರಾವೋ ನಾಯಕತ್ವದ ವೆಸ್ಟ್ ಇಂಡೀಸ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ವಿಂಡೀಸ್ ಕ್ರಿಕೆಟ್ ಆಟಗಾರರ ಆಸೋಸಿಯೇಶನ್ ನಿರ್ಧಾರದಂತೆ ಸರಣಿಯಿಂದ ವಿಂಡೀಸ್ ತಂಡ ಹಿಂದೆ ಸರಿಯಲು ನಾಯಕ ಡ್ವೇನ್ ಬ್ರಾವೋ ನಿರ್ಧರಿಸಿದ್ರು. ಈ ಮೂಲಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಎಚ್ಚರಿಕೆ ನೀಡಲು ಮುಂದಾದರು.

ದರ್ಮಶಾಲದಲ್ಲಿ ಆಯೋಜಿಸಲಾದ 4ನೇ ಏಕದಿನ ಪಂದ್ಯದ ಟಾಸ್‌ಗೂ ಮುನ್ನ ವೆಸ್ಟ್ ಇಂಡೀಸ್ ಸರಣಿಯಿಂದ ಹಿಂದೆ ಸರಿಯಿತು. ಈ ವೇಳೆ ಬಿಸಿಸಿಐ ವಿಂಡೀಸ್ ತಂಡವನ್ನ ಮನವೊಲಿಸೋ ಪ್ರಯತ್ನ ಮಾಡಿತ್ತು. ಆಟಗಾರರಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಿಂದ ಬರಬೇಕಾದ ಸಂಭಾನೆಯನ್ನ ಬಿಸಿಸಿಐ ನೀಡೋದಾಗಿ ಹೇಳಿತ್ತು ಎಂದು ಬ್ರಾವೋ ಹೇಳಿದ್ದಾರೆ.

ಬಿಸಿಸಿಐ ನಮ್ಮ ಬೆಂಬಲಕ್ಕೆ ನಿಂತಿತ್ತು. ಆದರೆ ಬಿಸಿಸಿಐ ನಮಗೆ ಹಣ ನೀಡಬೇಕಿಲ್ಲ. ಇದು ವೆಸ್ಟ್ ಇಂಡೀಸ್ ಮಂಡಳಿ ಕರ್ತವ್ಯ ಎಂದು ಬಿಸಿಸಿಐ ಆಫರ್ ನಿರಾಕರಿಸಿದ್ದೆ ಎಂದು ಬ್ರಾವೋ ಹೇಳಿದ್ದಾರೆ. ಈ ಪ್ರಕರಣದ ಬಳಿಕ ವೆಸ್ಟ್ ಇಂಡೀಸ್ ತಂಡದಿಂದ ಹೊರಬಿದ್ದೆ. ಮತ್ತೆ ವಿಂಡೀಸ್ ತಂಡವನ್ನ ಪ್ರತಿನಿಧಿಸಲು ಅವಕಾಶ ಸಿಗಲಿಲ್ಲ. ಕ್ರಿಕೆಟಿಗ ಆಸೋಸಿಯೇಶನ್ ಹಾಗು ವಿಂಡೀಸ್ ಕ್ರಿಕೆಟ್ ಮಂಡಳಿ ಗುದ್ದಾಟದಲ್ಲಿ ಆಟಗಾರರ ಪರ ನಿಂತ ನಾನು ಕ್ರೆಕೆಟ್ ಕಳೆದುಕೊಂಡೆ ಎಂದು ಬ್ರಾವೋ ಬೇಸರ ವ್ಯಕ್ತಪಡಿಸಿದ್ದಾರೆ.