ಸ್ಪಿನ್‌ ಮಾಂತ್ರಿಕ ರವೀಂದ್ರ ಜಡೇಜಾ (66ಕ್ಕೆ 4) ತೋರಿದ ಚಮತ್ಕಾರಿ ಬೌಲಿಂಗ್‌ನಿಂದಾಗಿ ಹೊನಲು ಬೆಳಕಿನ ದುಲೀಪ್‌ ಟ್ರೋಫಿಯ ಫೈನಲ್‌ನಲ್ಲಿ ಗೌತಮ್‌ ಗಂಭೀರ್‌ ಸಾರಥ್ಯದ ಇಂಡಿಯಾ ಬ್ಲೂ ಸಂಪೂರ್ಣ ಮೇಲುಗೈ ಸಾಧಿಸಿದ್ದು, ಇನ್ನಿಂಗ್ಸ್‌ ಮುನ್ನಡೆಯತ್ತ ಸಾಗಿದೆ.

ಇಲ್ಲಿನ ಗ್ರೇಟರ್‌ ನೋಯ್ಡಾ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದ ರಾತ್ರಿಯ ಭೋಜನ ವಿರಾಮಕ್ಕೆ ಇಂಡಿಯಾ ಬ್ಲೂ ವಿರುದ್ಧ ಇಂಡಿಯಾ ರೆಡ್‌ 74 ಓವರ್‌ಗಳಲ್ಲಿ 7 ವಿಕೆಟ್‌ಗೆ 235 ರನ್‌ ಗಳಿಸಿತ್ತಲ್ಲದೆ, ಇನ್ನೂ 458 ರನ್‌ ಹಿನ್ನಡೆಯಲ್ಲಿದ್ದ ಅದು ಮಹಾನ್‌ ಹಿನ್ನಡೆಗೆ ಸಿಲುಕಿತು.

ಬಿನ್ನಿ ಏಕಾಂಗಿ ಹೋರಾಟ

ಚೇತೇಶ್ವರ ಪೂಜಾರ ಗಳಿಸಿದ ಭರ್ಜರಿ ದ್ವಿಶತಕದಿಂದಾಗಿ 6 ವಿಕೆಟ್‌ಗೆ 693 ರನ್‌ ಗಳಿಸಿ ತನ್ನ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡ ಇಂಡಿಯಾ ಬ್ಲೂ ವಿರುದ್ಧ ಎರಡನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್‌ಗೆ 16 ರನ್‌ ಗಳಿಸಿದ್ದ ಇಂಡಿಯಾ ರೆಡ್‌, ಸೋಮವಾರ ಆಟ ಮುಂದುವರೆಸಿ ಮತ್ತೆ ಬ್ಲೂ ತಂಡದ ಬೌಲರ್‌ಗಳ ಎದುರು ನಿಲ್ಲದಾದರು. ಮುಖ್ಯವಾಗಿ 14 ರನ್‌ ಮಾಡಿ ಔಟಾಗದೆ ಉಳಿದಿದ್ದ ಆರಂಭಿಕ ಶಿಖರ್‌ ಧವನ್‌ (29) ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ಮಯಾಂಕ್‌ ಅಗರ್ವಾಲ್‌ಗೆ ಕ್ಯಾಚಿತ್ತು ಕ್ರೀಸ್‌ ತೊರೆದರೆ, ರನ್‌ ಖಾತೆ ತೆರೆಯದೆ ಕ್ರೀಸ್‌ನಲ್ಲಿದ್ದ ನಾಯಕ ಯುವರಾಜ್‌ ಸಿಂಗ್‌ (17) ಕನ್ನಡಿಗ ಅಭಿಮನ್ಯು ಮಿಥುನ್‌ ದಾಳಿಯಲ್ಲಿ ಪೂಜಾರಾಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿಕೊಂಡರು. ಅಲ್ಲಿಂದಾಚೆಗೆ ಗುರ್ಕೀರತ್‌ ಸಿಂಗ್‌ (57: 83 ಎಸೆತ, 9 ಬೌಂಡರಿ) ಮತ್ತು ಸ್ಟುವರ್ಟ್‌ ಬಿನ್ನಿ (98: 159 ಎಸೆತ, 12 ಬೌಂಡರಿ, 4 ಸಿಕ್ಸರ್‌) ದಿಟ್ಟಬ್ಯಾಟಿಂಗ್‌ ನಡೆಸಿದರೂ, ಜಡೇಜಾ ಸ್ಪಿನ್‌ ಸುಳಿಗೆ ಇವರೂ ಸಿಲುಕಿದ್ದು ಮತ್ತೆ ತಂಡವನ್ನು ಹಿನ್ನಡೆಗೆ ನೂಕಿತು.

ಸಂಕ್ಷಿಪ್ತ ಸ್ಕೋರ್‌

ಇಂಡಿಯಾ ಬ್ಲೂ ಮೊದಲ ಇನ್ನಿಂಗ್ಸ್‌: 693/6 ಡಿಕ್ಲೇರ್‌

ಇಂಡಿಯಾ ರೆಡ್‌ ಮೊದಲ ಇನ್ನಿಂಗ್ಸ್‌

74 ಓವರ್‌ಗಳಲ್ಲಿ 7 ವಿಕೆಟ್‌ಗೆ 235

(ರಾತ್ರಿಯ ಭೋಜನ ವಿರಾಮದ ಹೊತ್ತಿಗೆ)

(ಗುರ್ಕೀರತ್‌ ಸಿಂಗ್‌ 57, ಸ್ಟುವರ್ಟ್‌ ಬಿನ್ನಿ 98; ರವೀಂದ್ರ ಜಡೇಜಾ 66ಕ್ಕೆ 4)