ಬೆಂಗಳೂರು[ಆ.26]: ಪ್ರಥಮ ದರ್ಜೆ ಕ್ರಿಕೆಟ್’ನಲ್ಲಿ ಬರೋಬ್ಬರಿ ಎರಡು ವರ್ಷಗಳ ಬಳಿಕ ಶತಕ ಸಿಡಿಸಿದ ಕರುಣ್ ನಾಯರ್ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ರೆಡ್ ತಂಡವನ್ನು ಫೈನಲ್’ಗೇರಿಸುವಲ್ಲಿ ಯಶಸ್ವಿಯಾದರು.  

ಇಲ್ಲಿನ ಆಲೂರು ಮೈದಾನದಲ್ಲಿ ನಡೆದ ಭಾರತ ರೆಡ್ ಹಾಗೂ ಬ್ಲೂ ತಂಡಗಳ ನಡುವಿನ ದುಲೀಪ್ ಟ್ರೋಫಿ ಪಂದ್ಯ ಡ್ರಾನೊಂದಿಗೆ ಮುಕ್ತಾಯವಾಯಿತು. ಪಂದ್ಯದ ಮೊದಲ ಇನಿಂಗ್ಸ್’ನಲ್ಲಿ ಮುನ್ನಡೆ ಸಾಧಿಸಿದ್ದ ಇಂಡಿಯಾ ರೆಡ್ ತಂಡ 3 ಅಂಕ ಪಡೆದು, ಫೈನಲ್ ಅವಕಾಶ ಖಚಿತಪಡಿಸಿಕೊಂಡಿತು. 

ಕರುಣ್ ಶತಕ ಜಸ್ಟ್ ಮಿಸ್, ಕುತೂಹಲಘಟ್ಟದತ್ತ ದುಲೀಪ್ ಟ್ರೋಫಿ

ಮೊದಲ ಇನಿಂಗ್ಸ್’ನಲ್ಲಿ ಕೇವಲ ಒಂದು ರನ್’ನಿಂದ ಶತಕ ವಂಚಿತರಾಗಿದ್ದ ಕರುಣ್ ನಾಯರ್ ದ್ವಿತೀಯ ಇನಿಂಗ್ಸ್’ನಲ್ಲಿ ಬರೋಬ್ಬರಿ 223 ಎಸೆತಗಳನ್ನು ಎದುರಿಸಿ 19 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 166 ರನ್ ಬಾರಿಸಿದರು. ಇನ್ನು ಮೊದಲ ಇನಿಂಗ್ಸ್’ನಲ್ಲಿ ಶತಕ ಸಿಡಿಸಿದ್ದ ಅಂಕಿತ್ ಕಲ್ಸಿ ದ್ವಿತೀಯ ಇನಿಂಗ್ಸ್’ನಲ್ಲಿ 64 ರನ್ ಬಾರಿಸಿ ಗಮನ ಸೆಳೆದರು. ದಿನದಾಟದ ಅಂತ್ಯಕ್ಕೆ ರೆಡ್ 6 ವಿಕೆಟ್ ಕಳೆದುಕೊಂಡು 297 ರನ್ ಬಾರಿಸಿತ್ತು. 

ಆಗಸ್ಟ್ 29 ರಂದು ಆರಂಭವಾಗಲಿರುವ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಇಂಡಿಯಾ ರೆಡ್ ತಂಡವು ಇಂಡಿಯಾ ಗ್ರೀನ್ ತಂಡವನ್ನು ಎದುರಿಸಲಿದೆ. ದುಲೀಪ್ ಟ್ರೋಫಿ ಫೈನಲ್ ಪಂದ್ಯ ಸೆಪ್ಟೆಂಬರ್ 04ರಂದು ನಡೆಯಲಿದ್ದು, ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸಲಿದೆ.  

ಸ್ಕೋರ್: 
ಭಾರತ ರೆಡ್ 285&297/6   
ಭಾರತ ಬ್ಲೂ 255