ಮುಂಬೈ(ಮೇ.18): ರಣಜಿ ಟ್ರೋಫಿ ಪಂದ್ಯಗಳಲ್ಲಿ ಡಿಆರ್‌ಎಸ್‌ ಅಳವಡಿಸಲು ರಾಜ್ಯ ಕ್ರಿಕೆಟ್‌ ತಂಡಗಳ ನಾಯಕರು ಹಾಗೂ ಕೋಚ್‌ಗಳು ಬಿಸಿಸಿಐಗೆ ಆಗ್ರಹಿಸಿದ್ದರೆ.

ಶುಕ್ರವಾರ ಇಲ್ಲಿ ನಡೆದ ಬಿಸಿಸಿಐ ವಾರ್ಷಿಕ ಸಮಾವೇಶದಲ್ಲಿ ಈ ವಿಚಾರ ಪ್ರಸ್ತಾಪಿಸಲಾಯಿತು. 2018-19ರ ಋುತುವಿನಲ್ಲಿ ಸಾಕಷ್ಟು ಕೆಟ್ಟಅಂಪೈರಿಂಗ್‌ ಪ್ರಸಂಗಗಳು ನಡೆದ ಕಾರಣ, ಮುಂದಿನ ಆವೃತ್ತಿಯಲ್ಲಿ ಅಂಪೈರಿಂಗ್‌ ಸಮಸ್ಯೆ ನಿಯಂತ್ರಿಸಲು ಡಿಆರ್‌ಎಸ್‌ ಅಳವಡಿಸಬೇಕು ಎಂದು ಕೇಳಿಕೊಳ್ಳಲಾಯಿತು.

ಇದೇ ವೇಳೆ ಟಾಸ್‌ ಗೆಲ್ಲುವ ತಂಡಕ್ಕೆ ಲಾಭ ತಪ್ಪಿಸಲು, ರಣಜಿ ಟ್ರೋಫಿಯಲ್ಲಿ ಟಾಸ್‌ ರದ್ದುಗೊಳಿಸುವ ಪ್ರಸ್ತಾಪವನ್ನು ಮಾಡಲಾಯಿತು. ಮೊದಲು ಬ್ಯಾಟಿಂಗ್‌ ಇಲ್ಲವೇ ಬೌಲಿಂಗ್‌ ಆಯ್ಕೆ ಮಾಡುವ ಅವಕಾಶವನ್ನು ಪ್ರವಾಸಿ ತಂಡದ ನಾಯಕನಿಗೆ ಬಿಡಬೇಕು ಎನ್ನುವ ಸಲಹೆ ಕೇಳಿಬಂತು. ಇದೇ ಮೊದಲ ಬಾರಿಗೆ ವಾರ್ಷಿಕ ಸಮಾವೇಶದಲ್ಲಿ ರಾಜ್ಯ ಮಹಿಳಾ ತಂಡದ ನಾಯಕಿ ಹಾಗೂ ಕೋಚ್‌ಗಳು ಸಹ ಪಾಲ್ಗೊಂಡಿದ್ದರು.