ಮ್ಯಾರಥಾನ್ ಕಾಳಗ ಗೆದ್ದ ನವತಾರೆ ಆಲ್ಕರಜ್! ಕಾರ್ಲೊಸ್ ಆಟ ಸ್ಪೆಷಲ್ ಎನಿಸಿದ್ದೇಕೆ?
* ಚೊಚ್ಚಲ ಬಾರಿಗೆ ವಿಂಬಲ್ಡನ್ ಗ್ರ್ಯಾನ್‌ಸ್ಲಾಂ ಗೆದ್ದು ಬೀಗಿದ ಕಾರ್ಲೊಸ್ ಆಲ್ಕರಜ್
* ಶ್ರೇಷ್ಠ ಆಟಗಾರನಿಗೆ ಸೋಲುಣಿಸಿದ ಸ್ಪೇನ್‌ನ 20 ವರ್ಷದ ಕಾರ್ಲೋಸ್ ಆಲ್ಕರಜ್
* ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಜೋಕೋವಿಚ್-ಆಲ್ಕರಜ್ ಫೈನಲ್ ಪಂದ್ಯ
ಲಂಡನ್(ಜು.18): ವಿಶ್ವ ಶ್ರೇಷ್ಠ ಆಟಗಾರರ ಎದುರು ದೊಡ್ಡ ಪಂದ್ಯಗಳನ್ನು ಗೆಲ್ಲಲು ಬೇಕಿರುವ ಪ್ರತಿಭೆ ಹಾಗೂ ಅಮೂರ್ತತೆಯ ಬಗ್ಗೆ ತಿಳಿದಿರುವ ಕೆಲವೇ ಕೆಲವು ಟೆನಿಸಿಗರಲ್ಲಿ ನೋವಾಕ್ ಜೋಕೋವಿಚ್ ಕೂಡ ಒಬ್ಬರು. ಅಂತಹ ಶ್ರೇಷ್ಠ ಆಟಗಾರನಿಗೆ ಸೋಲುಣಿಸಿದ ಸ್ಪೇನ್‌ನ 20 ವರ್ಷದ ಕಾರ್ಲೋಸ್ ಆಲ್ಕರಜ್ ವಿಂಬಲ್ಡನ್‌ನ ನೂತನ ದೊರೆಯಾಗಿ ಹೊರಹೊಮ್ಮಿ, ಟೆನಿಸ್ ಅಭಿಮಾನಿಗಳನ್ನು ಪುಳಕಿತರಾಗಿಸಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಪಂದ್ಯ ಸಾರ್ವಕಾಲಿಕ ಶ್ರೇಷ್ಠ ಪಂದ್ಯಗಳ ಸಾಲಿಗೆ ಸೇರಿತು ಎನ್ನುವುದರಲ್ಲಿ ಅನುಮಾನವಿಲ್ಲ. ಬರೋಬ್ಬರಿ 4 ಗಂಟೆ 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಒಂದು ಸೆಟ್ ಹಿನ್ನಡೆಯಿಂದ ಪುಟಿದೆದ್ದ ಆಲ್ಜರಜ್, 1-6, 7-6(8/6), 6-1, 3-6, 6-4 ಅಂತರದಲ್ಲಿ ಗೆದ್ದು ತಮ್ಮ ವೃತ್ತಿಬದುಕಿನ 2ನೇ ಗ್ರ್ಯಾನ್‌ಸ್ಲಾಂ ಟ್ರೋಫಿಗೆ ಮುತ್ತಿಟ್ಟರು.
ಈ ಪಂದ್ಯ ಆಲ್ಕರಜ್ ಯಾಕೆ ಭವಿಷ್ಯದ ‘ಸೂಪರ್ ಸ್ಟಾರ್’ ಎಂದು ಪರಿಗಣಿಸಲ್ಪಟ್ಟಿದ್ದಾರೆ ಎನ್ನುವುದಕ್ಕೆ ಕೈಗನ್ನಡಿ ಹಿಡಿದಂತಿತ್ತು. ಜೋಕೋವಿಚ್ ವಿರುದ್ಧ ಗ್ರ್ಯಾನ್‌ಸ್ಲಾಂ ಫೈನಲಲ್ಲಿ ಗೆಲ್ಲುವುದು ಸುಲಭದ ಮಾತಲ್ಲ. ಅದೂ ಒಂದು ಸೆಟ್ ಹಿನ್ನಡೆ ಅನುಭವಿಸಿದ ಮೇಲೂ ಗೆಲುವನ್ನು ಒಲಿಸಿಕೊಳ್ಳುವುದು ತೀರಾ ಕಷ್ಟ. ಟೈ ಬ್ರೇಕರ್‌ಗಳಲ್ಲಿ ಜೋಕೋ ಅಸಾಮಾನ್ಯ ದಾಖಲೆ ಹೊಂದಿದ್ದಾರೆ. ಸತತ 15 ಟೈ ಬ್ರೇಕರ್‌ಗಳನ್ನು ಗೆದ್ದಿದ್ದ ಜೋಕೋವಿಚ್‌ಗೆ 2ನೇ ಸೆಟ್‌ನ ಟೈ ಬ್ರೇಕರ್‌ನಲ್ಲಿ ಆಲ್ಕರಜ್ ಆಘಾತ ನೀಡಿದ್ದೇ ಪಂದ್ಯದ ಟರ್ನಿಂಗ್ ಪಾಯಿಂಟ್. ಇನ್ನು ಸರ್ಬಿಯಾದ ಟೆನಿಸ್ ಮಾಂತ್ರಿಕ ಪಂದ್ಯವನ್ನು 5ನೇ ಸೆಟ್‌ಗೆ ಕೊಂಡೊಯ್ದ ಮೇಲೆ ಅವರೇ ಗೆಲ್ಲುವ ಫೇವರಿಟ್ ಎನಿಸಿದ್ದರು. ಅವರಿಂದ ಗೆಲುವನ್ನು ಕಸಿದುಕೊಳ್ಳಬೇಕಿದ್ದರೆ ಆತ ಅಸಾಧಾರಣ ಆಟಗಾರನೇ ಆಗಿರಬೇಕು.
ವಿಂಬಲ್ಡನ್‌ಗೆ ಹೊಸ ದೊರೆ..! ವೆಲ್‌ಡನ್ ಕಾರ್ಲೊಸ್ ಆಲ್ಕರಜ್!
ಪ್ರತಿ ಹಂತದಲ್ಲೂ ಜೋಕೋವಿಚ್ ಪ್ರಯೋಗಿಸಿದ ಅಸ್ತ್ರಗಳನ್ನೇ, ಅವರ ವಿರುದ್ಧ ಆಲ್ಕರಜ್ ಕೂಡ ಪ್ರಯೋಗಿಸಿದರು. ಇದು ಜೋಕೋವಿಚ್‌ರ ಯೋಜನೆಗಳನ್ನು ಬುಡಮೇಲು ಮಾಡಿತು. ಸುಲಭವಾಗಿ ಗೆಲ್ಲಬಹುದಾದ ಪಾಯಿಂಟ್‌ಗಳನ್ನು ಜೋಕೋ ಕೈಚೆಲ್ಲುತ್ತಾ, ತಮ್ಮ ಹಿಡಿತದಲ್ಲಿದ್ದ ಪಂದ್ಯವನ್ನು ನಿಧಾನವಾಗಿ ಆಲ್ಕರಜ್‌ರ ಮಡಿಲಿಗೆ ಹಾಕಿದರು. ಒಂದು ಹಂತದಲ್ಲಿ ಜೋಕೋ ತಮ್ಮ ರಾಕೆಟನ್ನು ನೆಟ್‌ನ ಕಂಬಕ್ಕೆ ಬಡಿದು ಹತಾಶೆ ಹೊರಹಾಕಿದರು. ತಮ್ಮ ತಾಳ್ಮೆ, ನಗು ಮುಖದಿಂದಲೇ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವ ಛಾತಿ ಇರುವ ಜೋಕೋವಿಚ್‌ರನ್ನೇ ಒತ್ತಡಕ್ಕೆ ಸಿಲುಕಿಸಿದ್ದು ಆಲ್ಕರಜ್‌ರ ಹಿರಿಮೆ.
ಆಲ್ಕರಜ್ ಆಟ ಸ್ಪೆಷಲ್ ಎನಿಸಿದ್ದೇಕೆ?
ಜೋಕೋವಿಚ್ 35 ಬಾರಿ ಗ್ರ್ಯಾನ್ ಸ್ಲಾಂ ಫೈನಲ್‌ಗಳಲ್ಲಿ ಆಡಿ, 23ರಲ್ಲಿ ಗೆದ್ದಿರುವ ದಿಗ್ಗಜ. ತಮ್ಮ ಸಮಕಾಲಿನ ದಿಗ್ಗಜರಾದ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ವಿರುದ್ಧ 109 ಬಾರಿ ಸೆಣಸಾಡಿ ಮೇಲುಗೈ ಸಾಧಿಸಿದ್ದಾರೆ. ದೊಡ್ಡ ಪಂದ್ಯಗಳನ್ನು ಗೆಲ್ಲಲು ಬೇಕಿರುವ ಮನಸ್ಥಿತಿ, ಒತ್ತಡ ನಿರ್ವಹಣೆಯ ಕೌಶಲ್ಯ, ಗಂಟೆಗಟ್ಟಲೇ ದಣಿಯದೆ ಅಂಕಣದಲ್ಲಿ ಸೆಣಸಲು ಬೇಕಿರುವ ದೈಹಿಕ ಕ್ಷಮತೆ, ಎದುರಾಳಿಯ ದೌರ್ಬಲ್ಯಗಳನ್ನೇ ಬಲವನ್ನಾಗಿಸಿಕೊಳ್ಳುವ ಚಾಕಚಕ್ಯತೆ, ಎದುರಾಳಿ ಏನು ಯೋಚಿಸುತ್ತಿದ್ದಾರೆ ಎನ್ನುವುದನ್ನು ಗ್ರಹಿಸಿಕೊಂಡು ಅದಕ್ಕೆ ತಕ್ಕಂತೆ ತಮ್ಮ ಆಟವನ್ನು ಬದಲಿಸಿಕೊಳ್ಳುವ ನೈಪುಣ್ಯತೆ ಇವೆಲ್ಲವೂ ಜೋಕೋವಿಚ್‌ರಲ್ಲಿದೆ. ಇವಿಷ್ಟನ್ನೂ ಆಲ್ಕರಜ್ ಸಹ ಪ್ರದರ್ಶಿಸಿದ್ದು, ಮುಂದಿನ ಕನಿಷ್ಠ ಒಂದು ದಶಕ ಟೆನಿಸ್ ಲೋಕವನ್ನು ಆಳಲಿದ್ದಾರೆ ಎನ್ನುವ ಭರವಸೆ ಅಭಿಮಾನಿಗಳಲ್ಲಿ ಮೂಡುವಂತೆ ಮಾಡಿತು.
RCB ಮ್ಯಾನೇಜ್‌ಮೆಂಟ್ ನಂಬಿಸಿ ಮೋಸ ಮಾಡಿತು..! ಬೆಂಗಳೂರು ಫ್ರಾಂಚೈಸಿ ವಿರುದ್ದ ನೊಂದು ನುಡಿದ ಚಹಲ್..!
ಮುಂದಿನ ತಿಂಗಳು ಆಲ್ಕರಜ್ ಯುಎಸ್ ಓಪನ್‌ನಲ್ಲಿ ಪ್ರಶಸ್ತಿ ಉಳಿಸಿಕೊಳ್ಳಲು ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಯುಎಸ್ ಓಪನ್‌ನಿಂದಲೇ ಆಲ್ಕರಜ್ ಯಾರು ಎನ್ನುವುದು ಟೆನಿಸ್ ಜಗತ್ತಿಗೆ ಪರಿಚಯವಾಗಿದ್ದು. ಈ ವರ್ಷದ ಯುಎಸ್ ಓಪನ್, ಆಲ್ಕರಜ್ ಎಷ್ಟು ದೂರ ಸಾಗಬಹುದು ಎನ್ನುವುದಕ್ಕೆ ಮಾಪನವಾಗಬಹುದು.